ಯಾರದರೂ ಮನೆ ಬಳಿ ಬಂದು ಮಹಿಳೆಯರಿಗೆ ಕಿರುಕುಳ ನೀಡಿದರೆ ಒದ್ದು ಒಳಗೆ ಹಾಕಿಸುತ್ತೇನೆ. ನೀವು ಭಯಪಡದೆ ನಿಶ್ಚಿಂತೆಯಿಂದಿರಿ ಎಂದು ಶಾಸಕ ಪ್ರದೀಪ್ ಈಶ್ವರ್ ಮಹಿಳೆಯರ ಗುಂಪೊಂದಕ್ಕೆ ಅಭಯ ಹಸ್ತ ನೀಡಿದರು.
ಚಿಕ್ಕಬಳ್ಳಾಪುರ ತಾಲೂಕಿನ ದಿನ್ನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಮ್ಮ ಊರು ನಮ್ಮ ಶಾಸಕರು ಕಾರ್ಯಕ್ರಮದಲ್ಲಿ ಮುಸಲ್ಮಾನ್ ಮಹಿಳೆಯರ ಸ್ವಸಹಾಯ ಗುಂಪುಗಳ ಅಹವಾಲು ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.

ಸಾಲದಾರರು(ಮೈಕ್ರೋ ಫೈನಾನ್ಸ್) ಯಾರೇ ಆಗಲಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಅದನ್ನು ಹೊರತುಪಡಿಸಿ ಮನೆ ಬಳಿ ಬಂದು ಮಹಿಳೆಯರೊಂದಿಗೆ ಅನುಚಿತವಾಗಿ ಮಾತನಾಡುವುದು, ಕಿರುಕುಳ ನೀಡುವುದು ಗೊತ್ತಾದರೆ ಕೂಡಲೇ ನನ್ನ ಗಮನಕ್ಕೆ ತನ್ನಿ. ಅಂತವರ ವಿರುದ್ಧ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಮಹಿಳೆಯೊಬ್ಬರು, ಸಾಲ ತೆಗೆದುಕೊಳ್ಳೂವಾಗ ಚೆನಾಗಿರುತ್ತೆ, ಕಟ್ಟುವಾಗ ಆಗಲ್ವಾ? ನಮಗೆ ಹಣ ಬೇಕು ಏನಾದರೂ ಮಾಡಿ ಕಟ್ಟಿ ಎಂದು ಅಸಭ್ಯವಾಗಿ ಮಾತುಗಳನ್ನಾಡುತ್ತಿದ್ದಾರೆ. ಗಂಡಸರು ಮನೆಗೆ ಬಾರದಂತಾಗಿದ್ದಾರೆ. ದಿನಕ್ಕೊಬ್ಬರು ಸಾಲಗಾರರು ಬರುತ್ತಿದ್ದಾರೆ. ಇದರಿಂದ ನೆಮ್ಮದಿ ಇಲ್ಲದಾಗಿದೆ ಎಂದು ದೂರಿದರು.
ಮತ್ತೋರ್ವ ಮಹಿಳೆ ಮಾತನಾಡಿ, ಐದಾರು ಜನರು ಬೆಳಗಾದರೆ ಸಾಕು ಮನೆ ಬಾಗಿಲಿಗೆ ಬರುತ್ತಿದ್ದಾರೆ. ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಸತ್ತೀದ್ದೀರಿ ಎಂದಾದರೂ ಡೆತ್ ಸರ್ಟಿಫಿಕೇಟ್ ಕೊಡಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಪ್ರದೀಪ್ ಈಶ್ವರ್ ನಡೆ, ಹಳ್ಳಿ ಜನರ ಕಡೆ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ರೀತಿ ಯಾರೇ ಕಿರುಕುಳ ನೀಡಿದರೂ, ಅಂತವರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಈ ವೇಳೆ ತಹಶೀಲ್ದಾರ್ ಅನಿಲ್, ಇಒ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಅಧಿಕಾರಿ ಶೇಷಾದ್ರಿ, ಪಿಡಿಒ ಮದ್ದರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.