ಇತ್ತೀಚಿಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ, ಕೋಮು ದ್ವೇಷ, ತಪ್ಪು ಮಾಹಿತಿ ಹಾಗೂ ಬೆದರಿಕೆ ಸಂದೇಶಗಳಂತಹ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಇಂತಹ ಸಂದೇಶಗಳು, ವೈರಲ್ ಪೋಸ್ಟ್‌ಗಳ ಬಲೆಗೆ ಬಿದ್ದು ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಯುವಕರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಕಿವಿಮಾತು ಹೇಳಿದ್ದಾರೆ.
ಕಳೆದ ಕೇವಲ ಒಂದು ವಾರದಲ್ಲಿ ಕೋಮು ದ್ವೇಷ ಮತ್ತು ಸುಳ್ಳು ಪೋಸ್ಟ್‌ಗಳ ವಿರುದ್ಧ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳನ್ನು ಸೆನ್ ಕ್ರೈಂ ಪೊಲೀಸ್ ಠಾಣೆಯ ಎಸಿಪಿ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಸಮುದಾಯಗಳ ನಡುವೆ ಅಸಮಾಧಾನ ಉಂಟು ಮಾಡಲು ಸುಳ್ಳು ಸುದ್ದಿ ಹರಡಲು ಮತ್ತು ಇತರರನ್ನು ಬೆದರಿಸಲು ಪ್ರಯತ್ನಿಸುತ್ತಿರುವುದು ಗಂಭೀರ ಕಾನೂನು ಉಲ್ಲಂಘನೆಯಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವರು ನಕಲಿ ಪ್ರೊಫೈಲ್‌ಗಳನ್ನು ಪತ್ತೆಹಚ್ಚಲಾಗದು ಎಂದು ಭಾವಿಸಿದ್ದಾರೆ. ವಿದೇಶದಲ್ಲಿ ನೋಂದಾಯಿಸಿಕೊಂಡ ಖಾತೆಗಳನ್ನು ಬಳಸುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಅದು ಸಂಪೂರ್ಣ ತಪ್ಪು. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣ ಕಂಪನಿಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ಕೆಲಸ ಮಾಡುತ್ತಿದೆ. ಖಾತೆ ಎಲ್ಲಿಂದ ತೆರೆಯಲ್ಪಟ್ಟಿದ್ದರೂ ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಿ, ದ್ವೇಷ ಭಯ ಅಥವಾ ಸುಳ್ಳು ಮಾಹಿತಿ ಪ್ರಚಾರ ಮಾಡುವ ಅಥವಾ ಹಂಚುವ ಸಂದೇಶಗಳನ್ನು ಪೋಸ್ಟ್ ಮಾಡಬೇಡಿ, ಶಾಂತಿಯ ರಕ್ಷಕರಾಗಿ ಇರಿ, ದ್ವೇಷ ಸಂದೇಶಗಳು ಬಂದಾಗ ಅವುಗಳನ್ನು ಹಂಚಬೇಡಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು | ಸುಹಾಸ್ ಹತ್ಯೆ ಪ್ರಕರಣ; ಸ್ಪೀಕರ್ ಖಾದರ್ ರಾಜಿನಾಮೆಗೆ ಬಿಜೆಪಿ ಆಗ್ರಹ
ಕೋಪ ಅಥವಾ ದ್ವೇಷ ಉಂಟುಮಾಡುವ ಉದ್ದೇಶದಿಂದ ಒಂದು ಧರ್ಮ ಅಥವಾ ಸಮುದಾಯವನ್ನು ದೋಷಾರೋಪಣೆ ಮಾಡುವ ಸಂದೇಶ ಅಥವಾ ವೀಡಿಯೋ ಪೋಸ್ಟ್ ಮಾಡುವುದನ್ನು (ಕಲಂ 196, ಬಿಎನ್‌ಎಸ್) ಶಿಕ್ಷೆಗೊಳಪಡಿಸಬಹುದಾದ ಅಪರಾಧಗಳೆಂದು ಪರಿಗಣಿಸಲಾಗುತ್ತದೆ. ಇಂತಹ ಅಪರಾಧಗಳಿಗೆ 5 ವರ್ಷ ಜೈಲು ಅಥವಾ ದಂಡ ಅಥವಾ ಎರಡೂ ಇರಬಹುದು. ಯಾವುದೇ ವ್ಯಕ್ತಿಗಳನ್ನು ನಿನಗೆ ಪಾಠ ಕಲಿಸುತ್ತೇನೆ ಎಂದು ಬೆದರಿಸುವುದೂ ಸಹ (ಕಲಂ 351(1) ಬಿಎನ್‌ಎಸ್) ಅಪರಾಧವೆನಿಸಿಕೊಳ್ಳುತ್ತದೆ. ಆನ್‌ಲೈನ್ ಮೂಲಕ ದ್ವೇಷ ಭಾಷಣ ಮಾಡುವುದು, ನಿರ್ದಿಷ್ಟ ಗುಂಪು, ಸಮುದಾಯ, ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿ ಅಥವಾ ಪರಿಶೀಲಿಸದ ವಿಡಿಯೋ ಪೋಸ್ಟ್ ಮಾಡುವುದು ಮಾಡಿದರೆ 3 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಪಡಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಯಾವುದೇ ಅನುಮಾನಾಸ್ಪದ ವಿಷಯ ಗಮನಕ್ಕೆ ಬಂದ ತಕ್ಷಣ ಮಾಹಿತಿಗಾಗಿ ನೋಡಲ್ ಅಧಿಕಾರಿ, ಎಸಿಪಿ ಸೆನ್ ಪೊಲೀಸ್ ಠಾಣೆ 94480802321ಗೆ ದೂರು ನೀಡಿ (ನಿಮ್ಮ ಗುರುತು ಗೌಪ್ಯವಾಗಿರುತ್ತದೆ) ಎಂದು ತಿಳಿಸಿದ್ದಾರೆ.