ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಎಂದರೆ ಏಡ್ಸ್. ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಇದು ಒಂದು. ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅಗತ್ಯ ಮಾಹಿತಿ ನೀಡಬೇಕು. ಏಡ್ಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಎಂದು ಬಾಗೇಪಲ್ಲಿ ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶ ಮಂಜುನಾಥ ಚಾರಿ ಹೇಳಿದರು.
ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೋಂಕಿತರನ್ನು ಕೀಳರಿಮೆಯಿಂದ ಕಾಣಬಾರದು. ಅವರಿಗೆ ಬೆಂಬಲ ನೀಡುವ ಮೂಲಕ ಅವರು ಅನುಭವಿಸುತ್ತಿರುವ ಕಳಂಕ, ತಾರತಮ್ಯವನ್ನು ತೊಡೆದು ಹಾಕಬೇಕಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಯಾರೂ ತೊಡಗಬಾರದು. ‘ಏಡ್ಸ್ ರೋಗಿಗಳು ಒಂಟಿಯಲ್ಲ, ಅವರೊಂದಿಗೆ ನಾವೆಲ್ಲ ಇದ್ದೇವೆ’ ಎಂಬ ಭಾವನೆ ಮೂಡಿಸಬೇಕಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ ಹೇಳಿದರು.
ಇದನ್ನೂ ಓದಿ : ಬಾಗೇಪಲ್ಲಿ | ಪಾದಚಾರಿ ಮಾರ್ಗವಿಲ್ಲದ ಮುಖ್ಯರಸ್ತೆ, ಜನ ಹೈರಾಣು
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಂಜಿರೆಡ್ಡಿ, ವಕೀಲರಾದ ರಾಮಾಂಜಿ, ಚಿನ್ನಸ್ವಾಮಿ, ಪ್ರಸನ್ನ ಕುಮಾರ್, ವೆಂಕಟೇಶ್, ಎನ್.ನಾಗಭೂಷಣ, ಬಾಲು ನಾಯಕ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.