ಕೈಗಾರಿಕೆ ಸ್ಥಾಪೆಯಿಂದ ಕೊಪ್ಪಳವನ್ನು ಜಪಾನ್ ಮಾಡುವುದು ಬೇಡ, ಜೋಪಾನ ಮಾಡಿ ಸಾಕು ಎಂದು ಗವಿಸಿದ್ದ ಸ್ವಾಮೀಜಿ ಸಲಹೆ ನೀಡಿದರು.
ʼನಿಮ್ಮ ಉಕ್ಕಿನಿಂದ ನಮ್ಮ ನೆಲ ತುಕ್ಕು ಹಿಡಿಯುವುದು ಬೇಡ. ಬಂದಿರುವ ಕೈಗಾರಿಕಾ ಕಾರ್ಖಾನೆ ತೊಲಗಬೇಕುʼ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಕೊಪ್ಪಳ ಬಚಾವೋ ಅಭಿಯಾನದಲ್ಲಿ ಮಾತನಾಡಿದರು.
ಕೊಪ್ಪಳದ ಗವಿಮಠದ ಆವರಣದಿಂದ ಅಶೋಕ ವೃತ್ತದ ಮಾರ್ಗವಾಗಿ ನಗರ ಕ್ರಿಡಾಂಗಣದವರೆಗೂ ಬೃಹತ ಸಂಖ್ಯೆಯಲ್ಲಿ ಎಂಎಸ್‌ಪಿಎಲ್ ಮತ್ತು ಬಿಎಸ್‌ಪಿಎಲ್ ವಿಸ್ತಾರ ವಿರೋಧಿ ಆಂದೋಲನ, ಕೊಪ್ಪಳ ಬಂದ್ ಯಶಸ್ವಿಯಾಯಿತು.
“ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 202 ಕಾರ್ಖಾನೆಗಳಿವೆ. ಅಲ್ಲದೇ ಮತ್ತೆ ಹಲವಾರು ಕಾರ್ಖಾನೆಗಳು ಕೊಪ್ಪಳಕ್ಕೆ ವಕ್ಕರಿಸಲಿವೆ. ಕಾರ್ಖಾನೆಗಳ ಸ್ಥಾಪನೆಯಿಂದ ಕೊಪ್ಪಳ ತಿಪ್ಪೆಯಾಗುತ್ತಿದೆ. ಇದರಿಂದ ಸಣ್ಣಮಕ್ಕಳಿಗೆ ಅಸ್ತಮಾ, ಟಿಬಿ, ಕ್ಯಾನ್ಸರ್, ಗಂಡು ಮಕ್ಕಳಲ್ಲಿ ನಪುಂಸಕತೆ, ಗರ್ಭಿಣಿಯರಲ್ಲಿ ಶಿಶು ಬೆಳವಣಿಗೆ ಕುಂಠಿತಗೊಳ್ಳುವುದು, ತುಂಗಾಭದ್ರ ನದಿಯ ನೀರು ಕಲುಷಿತಗೊಳ್ಳುತ್ತಿರುವುದು ಸೇರಿದಂತೆ ಭೂಮಿಯ ಮಣ್ಣಿನ ಫಲವತ್ತತೆಯೂ ನಾಶವಾಗುತ್ತಿದೆ. ಮಠಕ್ಕೆ ದವಸ-ಧಾನ್ಯ, ಕಾಣಿಕೆ ಕೊಟ್ಟಂತ ಭಕ್ತರ ಆರೋಗ್ಯಕ್ಕೆ ಕಂಟಕ ಬಂದಾಗ ನಾ ಮಠ ಬಿಟ್ಟು ಹೊರ ಬಂದು ನಿಮ್ಮ ಪರವಾಗಿ ಹೋರಾಡದೆ ನನ್ನ ಆತ್ಮಕ್ಕೆ ವಂಚನೆ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಭಾವುಕರಾದರು.

“ನಾನು ಹೋರಾಟದ ನೇತೃತ್ವ ವಹಿಸಿಕೊಳ್ಳದೆ ಎಲ್ಲರ ನೇತೃತ್ವದಲ್ಲಿ ಹೊರಾಟ ಸಾಗಲಿ ಎಂಬುದು ತ ನನ್ನ ಆಶಯ. ಆದರೆ, ಮಾಧ್ಯಮಗಳು ತಿರುಚಿ ‘ಕಾರ್ಖಾನೆಗಳಿಗೆ ಶೆಡ್ಡು ಹೊಡೆದ ಗವಿಸಿದ್ದೇಶ್ವರ ಸ್ವಾಮೀಜಿʼ ಎಂದು ತಿರುಚಿ ಬರೆದಿದ್ದರು. ಅದರೆ, ನಾನು ಯಾರಿಗೂ ತೊಡೆ ತಟ್ಟಿಲ್ಲ. ನಾನು ಕೊಪ್ಪಳದ ನಾಗರಿಕರ ಆರೋಗ್ಯಕ್ಕೆ ಕುತ್ತು ಬಂದಾಗ ನಾನು ಅವರ ಪರವಾಗಿ ಅರಿವು, ಜಾಗೃತಿ ಮೂಡಿಸಲು ಬರದಿದ್ದರೆ ನನಗಿಂತ ಆತ್ಮವಂಚಕ ಇಲ್ಲ” ಎಂದು ಹೇಳಿದರು.
“ಕೊಪ್ಪಳಕ್ಕೆ ವಿಶೇಷ ಕೈಗಾರಿಕಾ ನೀತಿ ಬೇಕಾಗಿದೆ. ಆರೋಗ್ಯ ಸಂಬಂಧಿಸಿದ ಆಸ್ಪತ್ರೆ ಬೇಕಾಗಿದೆ. ಮಕ್ಕಳ ಶಿಕ್ಷಣಕ್ಕೆ ಉತ್ತಮ ಶಾಲೆಗಳು ಬೇಕು. ಇವುಗಳನ್ನು ಒದಗಿಸಲು ಸರ್ಕಾರ ಅಥವಾ ಕೈಗಾರಿಕೆ ಕಂಪನಿಯವರು ಬಡತನದಲ್ಲಿರುವರೇ” ಎಂದು ಪ್ರಶ್ನಿಸಿದರು.

“ಕೊಪ್ಪಳದ ಶಾಸಕರು, ಸಂಸದರು ಮತ್ತು ಎಂಎಲ್‌ಸಿಗಳೆಲ್ಲ ಪ್ರಬಲ ರಾಜಕಾರಣಿಗಳಾಗಿದ್ದು, ಒಬ್ಬ ಸರ್ಕಾರಿ ನೌಕರ ವರ್ಗಾಣೆ ಆಗಬೇಕಾದರೂ ನಿಮ್ಮ ಗಮನಕ್ಕೆ ಬರದೇ ಇರುವುದಿಲ್ಲ. ಇಂತಹ ಬೃಹತ್ ಕಾರ್ಖಾನೆ ಸ್ಥಾಪನೆ ಆಗುವುತ್ತಿರುವುದು ನಿಮ್ಮ ಗಮನಕ್ಕೆ ಬರಲಾರದಂಗ ಇರುತ್ತದೆಯೇ?. ಸರ್ಕಾರ ಪ್ರಜೆಗಳಿಗೆ ತಾಯಿ ಇದ್ದಂತೆ. ಆದರೆ ತಾಯಿಯ ಮಕ್ಕಳಿಗೆ ವಿಷ ಹಾಕಬೇಡಿ, ನೀವು ವಿಷ ಹಾಕಿದರೂ ನಿಮ್ಮ ವಿರುದ್ಧ ಯಾವುದೇ ‘ಬಂದ್’ ಮಾಡುವುದಿಲ್ಲ. ಕೊಪ್ಪಳದ ಜನರು ಆರೋಗ್ಯಕರವಾಗಿ ಉಸಿರಾಡುವುದಕ್ಕೆ ಬಿಡಿ” ಎಂದು ಭಾವುಕರಾಗಿ ಮಾತನಾಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, “ಕೊಪ್ಪಳ ನಾಗರಿಕರ ಆರೋಗ್ಯಕ್ಕೆ ಕುತ್ತು ತರುವಂಥ ಕಾರ್ಖಾನೆಗಳನ್ನು ಅಲ್ಲಿ ಸ್ಥಾಪಿಸಲು ಬಿಡುವುದಿಲ್ಲ. ಅದನ್ನು ಹಿಂಪಡೆಯಲಾಗುವುದೆಂದು ಮುಖ್ಯಮಂತ್ರಿಗಳು ಈಗಾಗಲೆ ಹೇಳಿದ್ದಾರೆ” ಎಂದರು.
ಗಿಣಿಗೇರಿ ಸ್ವಾಮಿಜಿ ಮಾತನಾಡಿ, “ಇರುವ ಕಾರ್ಖಾನೆಗಳಲ್ಲಿ ಕೊಪ್ಪಳ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ, ಹೊರ ರಾಜ್ಯಗಳ ಯುವಕರಿಗೆ ಉದ್ಯೋಗ ಕೊಡುತ್ತಿದ್ದಾರೆ. ಕೈಗಾರಿಕಾ ಕಾರ್ಖಾನೆಗಳಿಂದ ಗ್ರಾಮದಿಂದ ಪರ ಊರಿಗೆ ಹೋಗಬೇಕಾದರೆ ಕೈ-ಕಾಲು ತೊಳಕೊಂಡು ಹೋಗಬೇಕಾದ ದುಃಸ್ಥಿತಿ ಬಂದಿದೆ. ಕಂಬನಿ ಮಿಡಿಯುವುದು ಮುಗಿದಿದೆ ಈಗ ಕಂಬನಿಯ ಧ್ವನಿ ದಿಲ್ಲಿಗೆ ಮುಟ್ಟಬೇಕಾಗಿದೆ” ಎಂದು ಹೇಳಿದರು.

ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಜನ-ಜಾನುವಾರುಗಳು, ಪಕ್ಷಿಗಳು ನಲುಗಿ ಹೋಗಿವೆ. ಅಲ್ಲಿಯ ರೈತರಿಗೆ ಕೈಗಾರಿಕಾ ಕಾರ್ಖಾನೆಗಳಿಂದ ಪರಿಹಾರ ಕೊಡಿಸಬೇಕು” ಎಂದು ಒತ್ತಾಯಿಸಿದರು.
“ಎಂಎಸ್‌ಪಿಎಲ್, ಬಿಎಸ್‌ಪಿಎಲ್ ಕಂಪನಿಗಳ ಪರವಾನಗಿ ವಾಪಸ್ ಪಡೆಯಬೇಕು. ವಿದ್ಯುತ್ ಅಣುಸ್ಥಾವರ ಅರಸನಕೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಸ್ಥಾಪನೆ ಮಾಡಲು ಕೆಲಸ ನಡೆಯುತ್ತಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ವಿದ್ಯುತ್ ಉತ್ಪಾದನೆ ಸೂರ್ಯನ ಶಾಖದಿಂದ ತಯಾರಿಸುವಂತ ಘಟಕವನ್ನು ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
ಇಸ್ಲಾಮ್ ಧರ್ಮಗುರು ಮಾತನಾಡಿ, “ನಮ್ಮ ಗಾಳಿ, ನೆಲ, ಮಣ್ಣು ಸ್ವರ್ಗಕ್ಕಿಂತ ಮೇಲು. ಇದನ್ನು ನರಕ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಸರ್ಕಾರ ಕೈಗಾರಿಕಾ ಕಾರ್ಖಾನೆಗೆ ಅವಕಾಶ ಮಾಡಿಕೊಡಬಾರದು” ಎಂದು ಒತ್ತಾಯಿಸಿದರು.
ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, “ಒಳ್ಳೆಯ ಅರೋಗ್ಯ ಮಕ್ಕಳಿಗೆ ಕೊಡಬೇಕಾಗಿದೆ. ಹೋರಾಟ ಕಂಪನಿಗಳ ವಿರುದ್ಧವಲ್ಲ, ನಮ್ಮ ಅರೋಗ್ಯಕ್ಕಾಗಿ ಹೋರಾಟ. ಕೈಗಾರಿಕಾ ಕಾರ್ಖಾನೆಗಳು ಸ್ಥಳಾಂತರ ಆಗುವವರೆಗೂ ಬಲಿಷ್ಠ ಕಾರ್ಖಾನೆ ಮಾಲೀಕರ ವಿರುದ್ಧ ಹೋರಾಟ ಮಾಡೋಣ” ಎಂದು ಕರೆಕೊಟ್ಟರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಬೆಸ್ಕಾಂ ಕಚೇರಿ ಮುಂದೆ ಅಡುಗೆ ತಯಾರಿಸಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ
ಜೆಡಿಎಸ್ ಸಿ.ವಿ ಚಂದ್ರಶೇಖರ ಮಾತನಾಡಿ, “ಉಕ್ಕಿನ ಕೈಗಾರಿಕಾ ಹುದ್ದೆಯಿಂದ ಯಾರಿಗೆ ಲಾಭವಿದೆ. ಕೊಪ್ಪಳದ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯಕ್ಕೆ, ಪರಿಸರಕ್ಕೆ ಹಾನಿಯಾಗಿದೆ. ಕಾರ್ಖಾನೆಯವರು ನಮ್ಮ ಆರೋಗ್ಯ, ಭೂಮಿ, ಜಲ, ನೆಲ ಹಾಳು ಮಾಡಿದ್ದಾರೆ. ಆದ್ದರಿಂದ, ಸರ್ಕಾರ ಇಂತಹ ಕಾರ್ಖಾನೆಗಳಿಗೆ ಅವಕಾಶ ಮಾಡಿಕೊಡಬಾರದು” ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ಮಾತನಾಡಿ, “ಊರು ಕೊಳ್ಳೆ ಹೊಡೆದ ಮೇಲೆ, ಕೋಟೆ ಬಾಗಿಲ ಹಾಕಿದಂತಾಗಿದೆ. ಜನರ ಜನ-ಜೀವನಕ್ಕೆ ತೊಂದರೆಯಾಗುವಂತ ಕಾರ್ಖಾನೆಗಳನ್ನು ಸ್ಥಾಪಿಸುವಾಗ ಎಚ್ಚರ ವಹಿಸಬೇಕಿತ್ತು. ಆದರೆ, ಸರ್ಕಾರ ಇದರಿಂದ ಎಚ್ಚೆತ್ತುಕೊಳ್ಳಲಿಲ್ಲ” ಎಂದು ಆರೋಪಿಸಿದರು.