ಕೆಂಪೇಗೌಡರನ್ನು ಅಪಮಾನಿಸುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಕಳಂಕ ತಂದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಒಕ್ಕಲಿಗ ಸಂಘದ ನಿರ್ದೇಶಕ ಹಾಗೂ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಖಡಕ್ ಎಚ್ಚರಿಕೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಡಿಬಂಡೆ, ಚಿಕ್ಕಬಳ್ಳಾಪುರಕ್ಕೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ಹಾಳು ಮಾಡುವುದು ಬೇಡ. ನಾಲ್ಕು ಗೋಡೆಗಳ ನಡುವೆ ಇರಬೇಕಾದ ವಿಚಾರವನ್ನು ಬೀದಿಗೆ ತಂದಿದ್ದೀರಿ ಎಂದು ಕಿಡಿಕಾರಿದರು.
ಗುಡಿಬಂಡೆಯಲ್ಲಿ ಪುತ್ಥಳಿ ನಿರ್ಮಾಣದ ವಿಚಾರದಲ್ಲಿ ಒಕ್ಕಲಿಗರು ಮತ್ತು ಬಲಿಜಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವ್ಯಕ್ತಿಯೋರ್ವ ಕೆಂಪೇಗೌಡರಿಗೆ ಚಪ್ಪಲಿ ಹಾರ ಹಾಕುತ್ತೇವೆ ಎಂದು ಹೇಳುವ ಮೂಲಕ ಕೆಂಪೇಗೌಡರಿಗೆ ಮತ್ತು ಇಡೀ ಸಮುದಾಯಕ್ಕೆ ಅಪಮಾನ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇವೆ. ಈ ರೀತಿ ಹೇಳಿರುವ ವ್ಯಕ್ತಿ ಕ್ಷಮೆ ಕೇಳದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ಒಕ್ಕಲಿಗ ಸಮುದಾಯ ಶಾಂತಿ ಸಾಮರಸ್ಯದಿಂದ ಎಲ್ಲರ ಜೊತೆ ಬದುಕುತ್ತಿದೆ. ಗುಡಿಬಂಡೆಯ ಅಂಬೇಡ್ಕರ್ ವೃತ್ತದಲ್ಲಿ ಎರಡು ಗುಂಟೆ ಸರ್ಕಾರಿ ಖರಾಬಿನಲ್ಲಿ ಆವಳಿ ಬೈರೇಗೌಡ ಅವರ ವಿಗ್ರಹ ಪ್ರತಿಷ್ಠಾಪಿಸಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಆದರೆ, ಕೈವಾರ ತಾತಯ್ಯ ಅವರ ಪುತ್ಥಳಿ ಸ್ಥಾಪನೆಗೆ ಮುಂದಾಗಿದ್ದು, ಈ ವೇಳೆ ಎರಡೂ ಸಮುದಾಯಗಳ ನಡುವೆ ವಾಗ್ವಾದ ನಡೆದಿದೆ. ಆಗ ಕಿಡಿಗೇಡಿಯೊಬ್ಬ ಕೆಂಪೇಗೌಡರಿಗೆ ಅಪಮಾನ ಮಾಡಿದ್ದಾನೆ ಎಂದು ಗುಡುಗಿದರು.

ಕೈವಾರ ತಾತಯ್ಯ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ಕೆಲವರು ಜಾತಿಗಳ ನಡುವೆ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬಲಿಜ ಸಮುದಾಯದ ಹಿರಿಯರು ಸಾಮರಸ್ಯ ಕೆಡಿಸುವವರಿಗೆ ಬುದ್ಧಿ ಹೇಳಬೇಕು. ಕೆಂಪೇಗೌಡರನ್ನು ಅವಮಾನಗೊಳಿಸಿದ ವ್ಯಕ್ತಿ ಕ್ಷಮೆ ಕೇಳಬೇಕು. ಪೊಲೀಸರು ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಯಲುವಳ್ಳಿ ರಮೇಶ್ ಮಾತನಾಡಿ, ಗುಡಿಬಂಡೆಯ ಅಭಿವೃದ್ಧಿಗೆ ಕಾರಣರಾದವರು ಆವಳಿ ಬೈರೇಗೌಡರು. ಇಲ್ಲಿ ಅವರ ಪುತ್ಥಳಿ ಸ್ಥಾಪಿಸಲು ಕಾನೂನು ಅನುಮತಿಗಾಗಿ ಸಮುದಾಯದವರು ಕಾಯುತ್ತಿದ್ದರು ಎಂದರು.
ಒಕ್ಕಲಿಗರು ಜಾತಿ ತಾರತಮ್ಯ ಮಾಡಿಲ್ಲ. ಇತರೆ ಸಮುದಾಯಗಳ ಜೊತೆ ಅಣ್ಣ ತಮ್ಮಂದಿರ ರೀತಿ ಬದುಕುತ್ತಿದ್ದೇವೆ. ಆದರೆ ಕೆಲವು ಕಿಡಿಗೇಡಿಗಳು ಸಾರಮಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಯಾರ ತಂಟೆಗೂ ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವವರೂ ಅಲ್ಲ ಎಂದು ಆಕ್ರೋಶಗೊಂಡರು.
ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರಮೇಶ್ ಮಾತನಾಡಿ, ಕೆಂಪೇಗೌಡರಿಗೆ ಈ ರೀತಿಯ ಹೇಳಿರುವುದನ್ನು ಸಂಘ ಖಂಡಿಸುತ್ತದೆ. ಸಮಾಜದಲ್ಲಿ ಸಾಮರಸ್ಯ ಕೆಡಿಸಲು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಸಮುದಾಯ ಕಾನೂನಿನಡಿ ಹೋರಾಟ ನಡೆಸುತ್ತದೆ. ಕೈವಾರ ತಾತಯ್ಯ ಅವರು ಮಾನವ ಕುಲ ಒಂದೇ ಎಂದು ಸಾರಿದ್ದಾರೆ. ಅವರಿಗೆ ನಾವೆಲ್ಲರೂ ನಮಿಸುತ್ತೇವೆ ಎಂದರು.
ಇದನ್ನೂ ಓದಿ : ಬೆಂ.ಗ್ರಾಮಾಂತರ | ಮೇ 4ರಂದು ನೀಟ್ ಪರೀಕ್ಷೆ, ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ: ಜಿಲ್ಲಾಧಿಕಾರಿ
ಗುಡಿಬಂಡೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ ರೆಡ್ಡಿ ಮಾತನಾಡಿ, ಗುಡಿಬಂಡೆಯಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ ಕಡಿಮೆಯಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರೂ ಸೇರಿದಂತೆ ಆರೇಳು ಮಂದಿ ಸದಸ್ಯರು ಬಲಿಜ ಸಮುದಾಯದವರೇ ಇದ್ದಾರೆ. ಎಲ್ಲರೂ ಸೇರಿ ಇಲ್ಲಿ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.