ರಾಯಚೂರಿನ ಸಿಂಧನೂರು ನಗರದಲ್ಲಿ ನಿರ್ಮಾಣಗೊಂಡಿರುವ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿ ಮುಕ್ತಾಯವಾಗಿ ಮೂರು ತಿಂಗಳಾದರೂ ಇನ್ನು ಉದ್ಘಾಟನೆಯಾಗಿಲ್ಲ. ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಸತಿ ನಿಲಯ ವಿದ್ಯಾರ್ಥಿಗಳ ಸದ್ಬಳಕೆಗೆ ಲಭ್ಯವಾಗದೆ, ಅನುಪಯುಕ್ತವಾಗಿದ್ದು, ಉದ್ಘಾಟನೆಯ ನಿರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಕಾದುಕುಳಿತಿದ್ದಾರೆ.
2021ರಲ್ಲಿ ಕಟ್ಟಡ ಕಾಮಗಾರಿಗಾಗಿ ನಿವೇಶನ ಹಸ್ತಾಂತರಿಸಲಾಗಿತ್ತು. ಇದೀಗ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡು ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿದೆ. ಸುವ್ಯವಸ್ಥಿತ ಕಟ್ಟಡವೊಂದು ಬಳಕೆಗೆ ಸಿಗದೇ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ತೀವ್ರ ಅಸಹನೆ ಉಂಟು ಮಾಡಿದೆ.
ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಿದ ಸರ್ಕಾರ ಮರಳಿ ಕಾಮಗಾರಿ ಎಲ್ಲಿಗೆ ಬಂದಿದೆ ಎಂದೂ ಕಣ್ಣಾಯಿಸುವುದಿಲ್ಲ. ಕೋಟ್ಯಂತರ ಹಣ ಸುರಿಯುವುದಷ್ಟೇ ಗೊತ್ತು. ಆ ಕಾಮಗಾರಿಯ ಭವಿಷ್ಯದ ಕಾರ್ಯಾಚರಣೆ ಬಗ್ಗೆ ಸ್ಥಳೀಯ ಆಡಳಿತವೂ ತಲೆಕೆಡಿಸಿಕೊಳ್ಳುವುದಿಲ್ಲ. ಇದರಿಂದ ದೇಶದ ಆಸ್ತಿಯಾಗಿರುವ ಮಕ್ಕಳ ಭವಿಷ್ಯ ಅತಂತ್ರವಾಗುತ್ತದೆ. ಈಗಲಾದರೂ ಸರ್ಕಾರ ಆದಷ್ಟು ಬೇಗ ವಸತಿ ನಿಲಯ ಪ್ರಾರಂಭ ಮಾಡಿ ವಿದ್ಯಾರ್ಥಿಗಳ ಸಮಗ್ರ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ನಿವಾಸಿ ಸಫಾಯಿ ಕರ್ಮಚಾರಿಯೂ ಆಗಿರುವ ಜಾಗೃತಿ ಸಮಿತಿ ಸದಸ್ಯ ಮಂಜುನಾಥ ಮಾತನಾಡಿ, “ಹಾಸ್ಟೆಲ್ ಉದ್ಘಾಟನೆಯಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ದೂರದ ಹಳ್ಳಿಗಳಿಂದ ನಗರಕ್ಕೆ ಬರುತ್ತಿರುವ ಮಕ್ಕಳು ದಿನವೂ ಕಿಲೋಮೀಟರ್‌ಗಟ್ಟಲೆ ಪ್ರಯಾಣಿಸುತ್ತಿದ್ದಾರೆ. ಮಕ್ಕಳಿಗೆ ಸುಲಭವಾಗಿ ಶಿಕ್ಷಣವೇನೋ ಸಿಗುತ್ತಿದೆ. ಆದರೆ ಅದನ್ನು ಪಡೆಯುವ ಅವಕಾಶ ಕೊಲವೊಮ್ಮೆ ಸಿಗುವುದಿಲ್ಲ. ಬಡ ವಿದ್ಯಾರ್ಥಿಗಳು ದೂರದ ಊರುಗಳಿಂದ ಬಂದು ನಗರಗಳಲ್ಲಿ ಮನೆ ಬಾಡಿಗೆ ತೆಗೆದುಕೊಂಡು ಓದುವುದು ಅಸಾಧ್ಯ. ಈ ನಿಟ್ಟಿನಲ್ಲಿ ವಸತಿ ನಿಲಯಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕೂಡಲೇ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಿ, ವಸತಿ ನಿಲಯವನ್ನು ಉದ್ಘಾಟಿಸಿ ಬಳಕೆಗೆ ನೀಡಬೇಕು. ಆ ಮೂಲಕ ಮಕ್ಕಳು ಶಿಕ್ಷಣದ ಕಾರಣಕ್ಕೆ ಅರ್ಧ ದಿನ ಪ್ರಯಾಣದಲ್ಲೇ ಕಳೆಯುತ್ತಿರುವುದನ್ನು ತಪ್ಪಿಸಬೇಕು” ಎಂದರು.
ಕೆಲವವರು ವಸತಿ ಸಿಗದ ಕಾರಣ ಶಾಲಾ ಕಲಿಕೆಯನ್ನು ನಿಲ್ಲಿಸಿದ್ದಾರೆ. ಶಿಕ್ಷಣದ ಹಕ್ಕನ್ನೂ ದಕ್ಕಿಸಿಕೊಳ್ಳಲಾಗದೆ ಬದುಕಿನ ಪೈಪೋಟಿಗೆ ತಳ್ಳಲ್ಪಡುತ್ತಿದ್ದಾರೆ. ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಕಂಟಕವಾಗುತ್ತಿದೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಹಾಸ್ಟೆಲ್ ಆರಂಭವಾದರೆ ಮಕ್ಕಳು ನಿರಾಳವಾಗಿ ಓದುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಗಳ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸರ್ಕಾರ ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಸ್ಥಳೀಯ ನಿವಾಸಿ ಕರ್ನಾಟಕ ಜನಶಕ್ತಿ ಮುಖಂಡ ಬಸವರಾಜ್ ಬಾದರ್ಲಿ ಮಾತನಾಡಿ, “ಜಿಲ್ಲೆಯಲ್ಲಿ ಶಿಕ್ಷಣದ ಮಟ್ಟವನ್ನು ಮತ್ತಷ್ಟು ಏರಿಸಲು ವಸತಿ ನಿಲಯಗಳು ನೆರವಾಗಲಿವೆ. ಅನೇಕ ವರ್ಷಗಳಿಂದ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಾಗದೆ, ಸಾಕಷ್ಟು ಅವಕಾಶಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆ, ಅವರ ವಿದ್ಯಾಭ್ಯಾಸಕ್ಕೆ ಭದ್ರತೆ ನೀಡುವ ಉದ್ದೇಶದಿಂದ ಹೊಸ ವಸತಿ ವ್ಯವಸ್ಥೆ ಉದ್ಘಾಟನೆಗೊಂಡು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ವಸತಿಯಲ್ಲಿರುವ ಸೌಲಭ್ಯಗಳ ವ್ಯವಸ್ಥೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ” ಎಂದರು.
ಹಿಂದೆ ಸಮಾಜ ಕಲ್ಯಾಣ ಜಿಲ್ಲಾಧಿಕಾರಿ ಚಿದಾನಂದ ಕುರಿ ಅವರು ಅಧಿಕಾರಿದಲ್ಲಿದ್ದಾಗ ಹಾಸ್ಟೆಲ್ ಬಗ್ಗೆ ಗಮನಕ್ಕೆ ತರಲಾಗಿತ್ತು. ಅವರು ಸಚಿವರ ಸಮಯ ನಿಗದಿಯಾಗುತ್ತಿಲ್ಲ. ಆದಾಗ ಉದ್ಘಾಟನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇದಾಗಿ ಸುಮಾರು 6 ತಿಂಗಳುಗಳು ಕಳೆದಿವೆ. ಇನ್ನೂ ವಸತಿ ನಿಲಯಕ್ಕೆ ಉದ್ಘಾಟನೆ ಭಾಗ್ಯ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಿಂಧನೂರು ತಾಲೂಕು ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, “ವಸತಿ ನಿಲಯದ ಕಟ್ಟಡದ ಒಳಭಾಗದಲ್ಲಿ ಕೆಲವು ಸಣ್ಣ ಪುಟ್ಟ ಕೆಲಸಗಳು ಬಾಕಿಯಿವೆ. ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಮುಗಿದ ತಕ್ಷಣ ಸ್ಥಳೀಯ ಶಾಸಕರ ಸಮಯಕ್ಕೆ ಅನುಗುಣವಾಗಿ ಉದ್ಘಾಟನೆ ಮಾಡಲಾಗುವುದು” ಎಂದು ಹೇಳಿದರು.
ಇದನ್ನೂ ಓದಿ: ರಾಯಚೂರು | ಏಮ್ಸ್ ಮಂಜೂರು – ಕೇಂದ್ರದ ನಿರ್ಲಕ್ಷ್ಯ ಧೋರಣೆ ಖಂಡನೀಯ : ರಝಾಕ್ ಉಸ್ತಾದ್
ನೂತನವಾಗಿ ಅಧಿಕಾರ ವಹಿಸಿಕೊಳ್ಳಲಾಗಿದ್ದು, ವಸತಿನಿಲಯದ ಕುರಿತು ಮಾಹಿತಿ ಇಲ್ಲ. ಕೂಡಲೇ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿಂಧು ಹೇಳಿದರು.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಕುರಿತಾದ ವಿಷಯದಲ್ಲಿ ಇಂತಹ ವಿಳಂಬ ಸರ್ಕಾರದ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಎಬ್ಬಿಸುತ್ತಿದೆ. ಕಟ್ಟಡ ಸಿದ್ಧವಾಗಿದ್ದರೂ ಅಧಿಕೃತ ಉದ್ಘಾಟನೆಯಿಲ್ಲದ ಕಾರಣದಿಂದಾಗಿ ಅದು ಅನುಪಯುಕ್ತವಾಗಿದ್ದು, ಶಿಕ್ಷಣದ ಹಕ್ಕಿನಿಂದ ಹಲವಾರು ವಿದ್ಯಾರ್ಥಿನಿಯರು ವಂಚಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಶೀಘ್ರದಲ್ಲೇ ಉದ್ಘಾಟನೆ ಕಾರ್ಯ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ವಾಸೋಪಯೋಗಿ ಸೌಲಭ್ಯಗಳು ಲಭ್ಯವಾಗುವಂತೆ ಮಾಡುವುದರ ಮೂಲಕ ಶಿಕ್ಷಣ ವ್ಯವಸ್ಥೆಯ ಬುನಾದಿಯನ್ನು ಬಲಪಡಿಸಬೇಕಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್