2023ರ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ನವರ ಸುಳ್ಳು ಭರವಸೆ, ಪ್ರಚಾರಗಳನ್ನು ನಂಬಿ ಅವಕಾಶ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯಗೊಳಿಸಿ, ಮುಖ್ಯಮಂತ್ರಿ ಚರ್ಚೆಯಲ್ಲಿ ತಲ್ಲೀನವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಅಲಾಸ್‌ತಿಮ್ಮನಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಧಿಕಾರ ದುರುಪಯೋಗಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳೇ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ದಿ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದ್ಯಾವುದನ್ನೂ ಲೆಕ್ಕಿಸದೇ ಯಾವಾಗ, ಯಾರು ಮುಖ್ಯಮಂತ್ರಿ ಆಗಬೇಕು, ಯಾವಾಗ ಮುಖ್ಯಮಂತ್ರಿಯನ್ನ ಇಳಿಸಬೇಕು ಎಂಬ ಚರ್ಚೆಯಲ್ಲೇ ಮುಳುಗಿದೆ ಎಂದು ಕುಟುಕಿದರು.
ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದರು, ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ ನಾನು ತಂದಿದ್ದ 100 ಕೋಟಿ ಅನುದಾನದ ಕಾಮಗಾರಿಗಳು ಮಾತ್ರ ಕ್ಷೇತ್ರದಲ್ಲಿ ಆಗಿವೆ. ಅದರ ಉದ್ಘಾಟನೆ, ಶಂಕು ಸ್ಥಾಪನೆ ಕಾಮಗಾರಿಗಷ್ಟೇ ಇವರು ಹೋಗುತ್ತಿದ್ದಾರೆ. ಅದನ್ನ ಹೊರತುಪಡಿಸಿದರೆ ಕ್ಷೇತ್ರಕ್ಕೆ ಯಾವುದೇ ಅನುದಾನ ತಂದಿಲ್ಲ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಟಾಂಗ್ ನೀಡಿದರು.
ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇತ್ತ ಅತಿಥಿ ಉಪನ್ಯಾಸಕರಿಗೂ ನ್ಯಾಯ ಒದಗಿಸಿಲ್ಲ. ಇವರು ಪ್ರತೀ ವರ್ಷ ಎಷ್ಟು ಕಾಲೇಜುಗಳಿಗೆ, ಯಾವ ಕೋರ್ಸ್‌ಗಳಿಗೆ ಎಷ್ಟು ಹಣ ಎಂಬುದನ್ನ ನಿಗದಿ ಮಾಡಿ, ಹಣ ಪಡೆಯುತ್ತಿದ್ದಾರೆ. ಈ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ : ಕೋಲಾರ | ದಲಿತ ಹೋರಾಟಗಾರ ಕೊಮ್ಮಣ್ಣ ಎಂ ನಿಧನ
ಶಾಸಕರು ಹೊಸದಾಗಿ ಹಳ್ಳಿ ನೋಡ್ತಿದಾರೆ. ಜಿಪಂ, ತಾಪಂ ಚುನಾವಣೆ ಸಮೀಪಿಸುತ್ತಿದೆ. ಎಂಪಿ ಚುನಾವಣೆಯಲ್ಲಿ ಮುಖಭಂಗವಾಗಿದೆ. ಒಂದೇ ಬಾರಿಗೆ 36 ಸಾವಿರ ಮತಗಳು ವಿರುದ್ಧವಾಗಿ ಹೋಗಿವೆ ಎಂಬ ಕಾರಣಕ್ಕೆ ರಾತ್ರೋರಾತ್ರಿ ಭಯಬಿದ್ದು ಕೆಲಸಕ್ಕೆ ಮುಂದಾಗಿದ್ದಾರೆ ಅಷ್ಟೇ, ಹೃದಯದಿಂದ ಕೆಲಸ ಮಾಡುತ್ತಿಲ್ಲ. ಹುಟ್ಟಿದಾಗಿನಿಂದಲೂ ನಾಟಕವೇ ಅವರ ವೃತ್ತಿಯಾಗಿದೆ. ನಟನೆಯ ಮುಖವನ್ನಿಟ್ಟುಕೊಂಡು ಇದೀಗ ಜನರ ಮುಂದೆ ಹೋಗುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಅವರ ನಮ್ಮೂರು, ನಮ್ಮ ಶಾಸಕ ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿದರು.