ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಡಾ.ರಾಜ್ ಕುಮಾರ್ ಅವರು ನಟಿಸದೇ ಇರುವ ಪಾತ್ರವೇ ಇಲ್ಲ. ಅವರು ಕನ್ನಡದ ಆಸ್ತಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಣ್ಣಿಸಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ನಟ ಸಾರ್ವಭೌಮ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಡಾ.ರಾಜ್ ಕುಮಾರ್ ಎಂದರೆ ಕನ್ನಡದ ದೊಡ್ಡ ಶಕ್ತಿ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲಾ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ಸಮಾಜಕ್ಕೆ ಅತ್ಯುತ್ತಮ ಸಂದೇಶಗಳನ್ನು ನೀಡಿದವರು. ಸಚ್ಚಾರಿತ್ರ್ಯದ ಮೇರು ನಟ ಡಾ.ರಾಜ್ ಕುಮಾರ್ ಅವರು ಗೋಕಾಕ್ ಚಳುವಳಿಗೆ ಧುಮುಕಿದ ಪರಿಣಾಮ ಚಳುವಳಿಗೆ ಹೊಸ ಶಕ್ತಿ ಬಂದಿತು. ಕೇವಲ ನಟನಾ ಕೌಶಲ್ಯದಿಂದಷ್ಟೇ ಅಲ್ಲದೇ ನಾಡು ನುಡಿ ಹೋರಾಟಗಳಲ್ಲಿ ಭಾಗವಹಿಸಿ ಕನ್ನಡಿಗರನ್ನು ಪ್ರೇರೇಪಿಸುತ್ತಿದ್ದರು ಎಂದು ಹೊಗಳಿದರು.
ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಕೊಡುತ್ತಿದ್ದರು. ಒಡೆದು ಹೋದ ಅನೇಕ ಸಂಬಂಧಗಳು ಅವರ ಚಲನಚಿತ್ರಗಳನ್ನು ನೋಡಿಕೊಂಡು ಬಂದ ನಂತರ ಒಂದಾಗಿ ಗಟ್ಟಿಯಾಗುತ್ತಿದ್ದವು. ಅವರ ಚಲನಚಿತ್ರಗಳು ಕೌಟುಂಬಿಕ ಸಂದೇಶಗಳಿಂದ ಕೂಡಿದ್ದು, ಅವರು ಅತ್ಯುತ್ತಮ ಗಾಯಕರಾಗಿಯೂ ಜನಮನ ಗೆದ್ದಿದ್ದಾರೆ. ನೈತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳನ್ನು ಬಿತ್ತುವಲ್ಲಿ ಡಾ.ರಾಜ್ ಚಿತ್ರಗಳು ಯಶಸ್ವಿಯಾಗಿವೆ ಎಂದರು.
ಇದೇ ವೇಳೆ ಡಾ.ರಾಜ್ ಕುಮಾರ್ ಅವರ ಗಂಧದ ಗುಡಿ ಚಿತ್ರದ “ನಾವಾಡುವ ನುಡಿಯೇ ಕನ್ನಡ ನುಡಿ” ಚಲನ ಚಿತ್ರಗೀತೆಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಕನ್ನಡ ಭವನ ಲೋಕಾರ್ಪಣೆಗೆ ನಾನಾ ವಿಘ್ನ; ಸಾಹಿತ್ಯಾಸಕ್ತರ ಕಡೆಗಣನೆ ಆರೋಪ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೋ.ಕೋ.ಡಿ.ರಂಗಪ್ಪ ಮಾತನಾಡಿ, ಡಾ.ರಾಜಕುಮಾರ್ ಅವರು ನಟಿಸಿದ ಚಿತ್ರ ಕಥೆಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೂಡಿ ಬರುತ್ತಿದ್ದವು. ಅಭಿನಯವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಅವರು ಯಾವುದೇ ರೀತಿಯ ಪಾತ್ರವನ್ನು ನೀಡಿದರೂ ಸಹ ನೋಡುಗರಿಗೆ ಮನಮುಟ್ಟುವ ಹಾಗೆ ತಲುಪಿಸುವ ಕಲೆ ಅವರಲ್ಲಿತ್ತು. ಸರಳ ಜೀವನ ಅನುಸರಿಸಿದ್ದ ಅವರು ಅನ್ಯ ಭಾಷೆಯ ಚಿತ್ರರಂಗಗಳಿಂದ ಹೆಚ್ಚಿನ ಅವಕಾಶಗಳು ಬಂದರೂ ಸಹ ಒಪ್ಪಿಕೊಳ್ಳದೆ ಕನ್ನಡ ಅಭಿಮಾನವನ್ನು ಮೆರೆದರು. ತಾವು ನಟಿಸಿದ ಚಿತ್ರಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ದೃಶ್ಯಗಳಿಗೆ ಅವಕಾಶ ನೀಡುತ್ತಿರಲಿಲ್ಲ. ತಮ್ಮದೇ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್ ಮಾತನಾಡಿ, ಡಾ.ರಾಜಕುಮಾರ್ ಅವರು ಮೌಲ್ಯಗಳನ್ನು ಪಾಲಿಸುವಂತೆ ಇತರರಿಗೆ ಪ್ರೇರೇಪಿಸುವ ಕೆಲಸವನ್ನಷ್ಟೇ ಮಾಡಲಿಲ್ಲ. ತಾವು ನುಡಿದಂತೆ ನಡೆದುಕೊಳ್ಳುತ್ತಿದ್ದರು. ಶಿಸ್ತುಬದ್ಧ ಜೀವನವನ್ನು ಪಾಲಿಸುತ್ತಿದ್ದರು. ಯೋಗಾಭ್ಯಾಸವನ್ನು ತಮ್ಮ ಜೀವನದ ಮಾರ್ಗವನ್ನಾಗಿ ಅನುಸರಿಸಿಕೊಂಡು ನಟನೆಗೆ ಪೂರಕವಾದ ಧೃಡಕಾಯ ದೇಹವನ್ನು ಕೊನೆವರೆಗೂ ಕಾಪಾಡಿಕೊಂಡಿದ್ದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಮಾತನಾಡಿ, ಡಾ.ರಾಜಕುಮಾರ್ ಅವರು ಕೇವಲ ನಟ, ಗಾಯಕರಷ್ಟೇ ಆಗಿರಲಿಲ್ಲ. ಹೋರಾಟಗಾರರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ನಟನೆಯಿಂದ ಕನ್ನಡಿಗರ ಜನಮಾನಸದಲ್ಲಿ ಸದಾ ಮಿನುಗು ತಾರೆಯಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ರಾಜಕೀಯ ತಿರುವು ಪಡೆದುಕೊಂಡ ಗುಂಡೇಟು ಪ್ರಕರಣ; ಸುಧಾಕರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಇದೇ ಸಂದರ್ಭದಲ್ಲಿ ಮಳ್ಳೂರು ಮಹೇಶ್ ಕಲಾತಂಡದಿಂದ ಡಾ.ರಾಜ್ ಕುಮಾರ್ ಅವರು ನಟಿಸಿದ ಹಾಗೂ ಅವರು ಕಂಠದಾನ ಮಾಡಿದ ಚಲನಚಿತ್ರ ಗೀತೆಗಳ ಗಾಯನ ನಡೆಯಿತು. ಡಾ.ರಾಜಕುಮಾರ್ ಅವರ ಚಿತ್ರಾವಳಿಗಳನ್ನು ಸೆರೆಹಿಡಿದು ಸಂಗ್ರಹಿಸಿರುವ ಹಿರಿಯ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ರಾಜ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ನಗರಸಭೆ ಸದಸ್ಯ ಅಣ್ಣಯ್ಯಮ್ಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಡಾ.ರಾಜ್ ಕುಮಾರ್ ಅಭಿಮಾನಿಗಳು ಹಾಜರಿದ್ದರು.