ಹಿರಿಯ ಸಾಹಿತಿ ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಕವನ ಸಂಕಲನವು 2025ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಸವಿತಾ ಅವರೇ ಮುನ್ನಡೆಸುವ ಶಿವಮೊಗ್ಗದ ‘ನುಡಿ’ ಪ್ರಕಾಶನವು 2024ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. 25,000 ರೂ. ನಗದು ಹಾಗೂ ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ.
ಮೈಸೂರಿನ ಸಮತಾ ಅಧ್ಯಯನ ಕೇಂದ್ರವು 2022ರಲ್ಲಿ ಸ್ಥಾಪಿಸಿರುವ ಡಾ. ವಿಜಯಾ ದಬ್ಬೆ ಪ್ರಶಸ್ತಿಗೆ 2020-24ರ ಅವಧಿಯಲ್ಲಿ ಲೇಖಕಿಯರು ಪ್ರಕಟಿಸಿದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಲೇಖಕಿಯರು/ಪ್ರಕಾಶಕರಿಂದ ಒಟ್ಟು 110 ಸಂಕಲನಗಳು ಸ್ವೀಕೃತವಾಗಿದ್ದವು. ತೀರ್ಪುಗಾರರಾಗಿ ಹಿರಿಯ ಕವಿಗಳಾದ ಪ್ರೊ. ಚ ಸರ್ಮಮಂಗಳ, ಜಿ ಪಿ ಬಸವರಾಜು, ಡಾ. ಎಂ ಎಸ್ ವೇದಾ ಅವರಿದ್ದ ಸಮಿತಿಯು, ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸವಿತಾ ಅವರ ಅಖಂಡ ಮಾನವೀಯ ಪರ ನಿಲುವು ಅವರ ಎಲ್ಲಾ ಬರಹಗಳಂತೆ ಈ ಸಂಕಲನದಲ್ಲಿಯೂ ಮುಂದುವರಿದಿದೆ ಎನ್ನುವುದು ತೀರ್ಪುಗಾರರ ಒಮ್ಮತದ ಅಭಿಪ್ರಾಯವಾಗಿತ್ತು. ಜೂ.1ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರು | ಕಾವ್ಯ, ಪುಸ್ತಕಗಳು ಜಾತಿ ಮತವಿಲ್ಲದೆ ಜಾತ್ಯತೀತವಾಗಬೇಕು : ರಘುನಂದನ
ಸವಿತಾ ನಾಗಭೂಷಣ ಅವರ ಕುರಿತು:
ಸವಿತಾ ಹುಟ್ಟಿದ್ದು(1961) ಚಿಕ್ಕಮಗಳೂರಿನಲ್ಲಿ. ಶಿವಮೊಗ್ಗದಲ್ಲಿ ಸಂಪೂರ್ಣ ವಿದ್ಯಾಭ್ಯಾಸ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ. ಕನ್ನಡದಲ್ಲಿ ಕವಿ, ಕತೆಗಾರ್ತಿ, ಕಾದಂಬರಿಗಾರ್ತಿ. ಪತಿ ಡಿ ಎಸ್ ನಾಗಭೂಷಣ ಅವರ ಜತೆಗೂಡಿ ‘ಹೊಸ ಮನುಷ್ಯ’ ಪತ್ರಿಕೆಯನ್ನು ಸಂಪಾದಿಸುತ್ತಿದ್ದರು. ಅಂಚೆ ಕಚೇರಿಯಲ್ಲಿ 20 ವರ್ಷದ ಸೇವೆಯ ನಂತರ ಸ್ವಯಂ ನಿವೃತ್ತಿಹೊಂದಿ ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.
ʼನಾ ಬರುತ್ತೇನೆ ಕೇಳುʼ, ʼಚಂದ್ರನನ್ನು ಕರೆಯಿರಿ ಭೂಮಿಗೆʼ, ʼಹೊಳೆ ಮಗಳುʼ, ʼಜಾತ್ರೆಯಲ್ಲಿ ಶಿವʼ, ʼದರುಶನʼ, ʼಕರುಣಾಳುʼ, ʼದೇವರಿಗೆ ಹೋದೆವುʼ, ʼಕಡೇಮಾತುʼ, ʼದಿನದ ಪ್ರಾರ್ಥನೆʼ, ʼಯುದ್ಧ ವಿರೋಧಿ ಶಾಂತಿಗೀತೆಗಳುʼ.. ಇವರ ಕವನ ಸಂಕಲನಗಳು. ʼಹಳ್ಳಿಯ ದಾರಿʼ, ʼಆಕಾಶಮಲ್ಲಿಗೆʼ, ʼಕಾಡುಲಿಲ್ಲಿ ಹೂಗಳುʼ… ಇವರ ಆಯ್ದ ಕವನಗಳ ಸಂಕಲನಗಳು. ‘ಸ್ತ್ರೀಲೋಕ’ ಕಾದಂಬರಿ, ‘ಅಜ್ಜಿ ಕರೆದ ಹಾಗಾಯಿತು’ ಕಥಾ ಸಂಕಲನ, ‘ಹೂ ಮನಸಿನ ಹೋರಾಟಗಾರ ಮತ್ತು ಇತರ ಲೇಖನಗಳು’ ಎಂಬ ಸಂಗ್ರಹ ಮುಂತಾದವು ಇವರ ಕೃತಿಗಳು. ಎಲ್ಲಾ ಪುಸ್ತಕಗಳಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಸಾಹಿತ್ಯ ಕ್ಷೇತ್ರದ ಜೀವಮಾನ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸಂದಿದೆ.