ತಾಯಿ ಮತ್ತು ಮಗನ ನಡುವಿನ ಗಲಾಟೆ ತಾರಕಕ್ಕೇರಿದ್ದು, ತಾಯಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಚಂದ್ರಶೇಖರ್(27) ಕೊಲೆ ಮಾಡಿರುವ ಆರೋಪಿ. ರಾಮಾಂಜಿನಮ್ಮ(55) ಕೊಲೆಯಾದ ತಾಯಿ. ಚಿಕ್ಕಹೊಸಹಳ್ಳಿ ಗ್ರಾಮದ ರಾಮಾಂಜಿನಮ್ಮಗೆ ಗಂಡ ಇರಲಿಲ್ಲ. ಚಂದ್ರಶೇಖರ್ ಹೆಂಡತಿಯೂ ಸಹ ಕುಡುಕ ಗಂಡನನ್ನು ಸಹಿಸಲಾಗದೆ ಮನೆ ಬಿಟ್ಟುಹೋಗಿದ್ದಳು. ತಾಯಿ ಮಗನ ನಡುವೆ ನಿತ್ಯ ಜಗಳವಾಗುತ್ತಿತ್ತು. ಬೇಸತ್ತಿದ್ದ ತಾಯಿ ಮೂರು ದಿನಗಳಿಂದ ಮನೆಗೆ ಬಂದಿರಲಿಲ್ಲ.
ಬುಧವಾರ ಮನೆಗೆ ಬಂದಿದ್ದ ತಾಯಿಯೊಂದಿಗೆ ಕುಡಿದು ಬಂದಿದ್ದ ಚಂದ್ರಶೇಖರ್ ಜಗಳ ಶುರು ಮಾಡಿ ಕೋಲಿನಿಂದ ಹೊಡೆದಿದ್ದ. ಆನಂತರ ಕೋಪಗೊಂಡಿದ್ದ ತಾಯಿಯೂ ಸಹ ಅಲ್ಲೇ ಬಿದ್ದಿದ್ದ ಕಸಗುಡಿಸುವ ಪೊರ್ಕೆಯಿಂದ ಹೊಡೆದಿದ್ದರು. ಇದಾದ ಬಳಿಕ ಕೋಪಗೊಂಡ ಮಗ ತಾಯಿಯನ್ನು ಹೊಡೆದು, ಅಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅಪಘಾತ; ಆವಲಗುರ್ಕಿಯ ಮೂವರು ವಿದ್ಯಾರ್ಥಿಗಳು ಸಾವು
ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿ ಚಂದ್ರಶೇಖರ್‌ನನ್ನು ಗೌರಿಬಿದನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.