ಜಲ ಜೀವನ ಮಿಷನ್ ಅಡಿ ರಾಜ್ಯ ಸರ್ಕಾರದ ಅನುದಾನವನ್ನೂ ಸಂಯೋಜಿಸಿ ಒಟ್ಟು 330 ಕೋಟಿ ರೂ. ವೆಚ್ಚದಲ್ಲಿ ಬೀದರ್ ತಾಲೂಕಿನ ಬಗದಲ್ ಮತ್ತು ಇತರೆ 104 ಹಾಗೂ ಚಿಟಗುಪ್ಪ ತಾಲೂಕಿನ ಮನ್ನಾಎಖೇಳಿ ಮತ್ತು ಸುತ್ತಲಿನ 32 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗುರುವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಬೀದರ್ ತಾಲೂಕಿನ 105 ಮತ್ತು ಚಿಟಗುಪ್ಪ ತಾಲೂಕಿನ 33 ಸೇರಿ ಒಟ್ಟು 137 ಜನವಸತಿಗಳಿಗೆ ಕೊಳವೆ ನೀರು ಸರಬರಾಜು ಯೋಜನೆ/ ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ತೆರೆದ ಬಾವಿ/ ಕೊಳವೆ ಬಾವಿಯನ್ನು ಜಲಮೂಲವನ್ನಾಗಿ ಪರಿಗಣಿಸಿ ನೀರು ಪೂರೈಕೆ ಮಾಡಲು ಅನುಮೋದನೆ ನೀಡಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಭೀಮರಾವ್ ನಾಯ್ಕ ತಾಂಡಾ ನಿವಾಸಿಗಳು
137 ಗ್ರಾಮಗಳ ಕುಡಿಯುವ ನೀರು ಯೋಜನೆಯ ಬಂಡವಾಳ ವೆಚ್ಚ 291.20 ಕೋಟಿ ರೂ. ಮತ್ತು ಸಗಟು ವೆಚ್ಚ 38.80 ಕೋಟಿ ರೂ. ಸೇರಿ ಒಟ್ಟು ಮೊತ್ತ 330 ಕೋಟಿ ರೂ. ಆಗಿದೆ. ಈ ಪೈಕಿ ಕೇಂದ್ರ ಸರ್ಕಾರ ಬಂಡವಾಳ ವೆಚ್ಚದ ಶೇ.50ರಷ್ಟು ಅಂದರೆ 145 ಕೋಟಿ ರೂ. ಮಾತ್ರ ಒದಗಿಸುತ್ತದೆ. ರಾಜ್ಯ ಸರ್ಕಾರ ಬಂಡವಾಳ ವೆಚ್ಚದ ಶೇ.50ರಷ್ಟು ಅಂದರೆ 145 ಕೋಟಿ ರೂ. ಜೊತೆಗೆ ಸಗಟು ನೀರಿನ ವೆಚ್ಚವಾದ 38.80 ಕೋಟಿ ರೂ. ಸೇರಿ ಒಟ್ಟು 184.40 ಕೋಟಿ ರೂ. ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದ್ದಾರೆ.