- ಪುತ್ತೂರಿನ ತೋಟಗಾರಿಕಾ ಇಲಾಖೆಯಿಂದ ಮಾವಿನ ಸಸಿಗಳ ಮಾರಾಟ
- ಮೇಳದಲ್ಲಿ ಗಮನ ಸೆಳೆದ ಹಲಸು, ಬಾಳೆ ಹಣ್ಣಿನ ತಿಂಡಿ ತಿನಿಸುಗಳು
ಮಾವು ಮತ್ತು ಹಲಸು ಬೆಳಯುವಂತೆ ರೈತರನ್ನು ರೈತರನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಇಂತಹ ಮೇಳಗಳು ಸಹಕಾರಿಯಾಗಿವೆ. ಜಿಲ್ಲಾಡಳಿತ ಉತ್ತಮ ಕೆಲಸ ಕೈಗೊಂಡಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ನಗರದ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ಮೇ 28ರ ವರೆಗೆ ಏರ್ಪಡಿಸಿರುವ ‘ಮಾವು ಮತ್ತು ಹಲಸು ಮೇಳ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾವು ಮತ್ತು ಹಲಸು ಮೇಳದಿಂದ ರೈತರು ನೇರವಾಗಿ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಜೊತೆಗೆ ಗ್ರಾಹಕರಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ ಮಾತನಾಡಿ, “ಮಾವು ಮತ್ತು ಹಲಸು ಮೇಳದಲ್ಲಿ 25ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ರಾಮನಗರ ಜಿಲ್ಲೆಯಿಂದ ಹೆಚ್ಚಿನ ಮಾವು ಬೆಳೆಗಾರರು ಆಗಮಿಸಿದ್ದಾರೆ. ರುಚಿಯಾದ ಮಾವು ಮತ್ತು ಹಲಸಿನ ಹಣ್ಣನ್ನು ಗ್ರಾಹಕರು ಸವಿಯುವಂತಾಗಬೇಕು. ಮೇಳದಿಂದ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಿದೆ” ಎಂದರು.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್ ಆರ್ ನಾಯಕ್, ಹಿರಿಯ ಸಹಾಯಕ ನಿರ್ದೇಶಕ ಸಿ ಎಂ ಪ್ರಮೋದ್ ಅವರು ಹಲವು ರೀತಿಯ ಮಾವು ಮತ್ತು ಹಲಸು ಬಗ್ಗೆ ಮಾಹಿತಿ ನೀಡಿದರು.
ಮಾವು ಮತ್ತು ಹಲಸು ಮೇಳದಲ್ಲಿ ಬಾದಾಮಿ, ರಸಪುರಿ, ಸಿಂಧೂರ, ತೋತಾಪುರಿ, ದಾಶೇರಿ, ನೀಲಂ, ರುಮಾನಿ, ಅಮ್ರಪಾಲಿ, ಕೊಡಗಿನ ಕಾಡು ಮಾವು, ಮಲ್ಗೋವ, ಮಲ್ಲಿಕಾ, ಬಂಗಿನಪಲ್ಲಿ, ಸಕ್ಕರೆ ಗುತ್ತಿ, ಕಲ್ಕತ್ತಾ ಗೋಲ್ಡ್, ಕೇಸರ್, ವಾಲಜ, ಇಮಾಮ್ ಪಸಂದ್, ಮುಂದ, ಕಾಲಪಾಡಿ, ಹೀಗೆ ಹದಿನೈದಕ್ಕೂ ಹೆಚ್ಚು ರೀತಿಯ ಮಾವಿನ ಹಣ್ಣುಗಳು ಮಾವು ಮೇಳದಲ್ಲಿ ಕಂಡು ಬಂದವು.
ಪಿಂಗಾರ ತೋಟಗಾರಿಕಾ ಫಾಮ್ರ್ಸ್ ಪ್ರೊಡ್ಯೂಷನ್ ವತಿಯಿಂದ ಹಲಸಿನಕಾಯಿ ಹಪ್ಪಳ, ಚಿಪ್ಸ್, ಹಲ್ವ, ಸುಕೇಲಿ, ಹಲಸಿನಕಾಯಿ ಬೀಜದ ಬಿಸ್ಕೇಟ್, ಬಾಳೆಹಣ್ಣಿನ ಹಪ್ಪಳ, ಬಾಳೆ ಕಾಯಿ ಹಪ್ಪಳ, ಪಲ್ಫ್ ಮತ್ತಿತರ ಹಲಸು ಮತ್ತು ಬಾಳೆ ಹಣ್ಣಿನ ತಿಂಡಿ ತಿನಿಸುಗಳು ಮೇಳದಲ್ಲಿಇತ್ತು.
ಈ ಸುದ್ದಿ ಓದಿದ್ದೀರಾ? ಎಂಟು ಜಿಲ್ಲೆಗಳಿಗೆ ಸಿಗದ ಸಚಿವ ಸ್ಥಾನದ ಪ್ರಾತಿನಿಧ್ಯ
ಪುತ್ತೂರಿನ ತೋಟಗಾರಿಕಾ ಇಲಾಖೆ ವತಿಯಿಂದ ಹಲವು ಮಾವಿನ ತಳಿಗಳಾದ ಮಲ್ಲಿಕಾ, ಕೇಸರ್, ಕಾಳಪಾಡಿ, ಮತ್ತಿತರ ಮಾವಿನ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಸಾವಯವ ಕೃಷಿ ದೃಢೀಕರಣ ನೀಡುವ ಸಂಸ್ಥೆ ವತಿಯಿಂದ ಬೆಲ್ಲದ ಪುಡಿ ಹಾಗೂ ಅಚ್ಚು ಬೆಲ್ಲವನ್ನು ಮಾರಾಟ ಮಾಡಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಹಾಪ್ ಕಾಮ್ಸ್ ಅಧ್ಯಕ್ಷರಾ ಬಿದ್ದಾಟಂಡ ರಮೇಶ್ ಚಂಗಪ್ಪ, ಹಾಪ್‍ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ನಿರ್ದೇಶಕ ನಾಗೇಶ್ ಕುಂದಲ್ಪಾಡಿ, ಎಸ್ ಪಿ ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಕೊನೇರಿರ ಎಂ ಮನೋಹರ್, ಸುವಿನ್ ಗಣಪತಿ, ಮಹೇಶ್, ಕಾಂಗೀರ ಸತೀಶ್ ಹಾಗೂ ಇತರರು ಇದ್ದರು.