ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್ಆರ್ಟಿಸಿ) ಬಸ್ ಚಾಲನೆ ವೇಳೆ, ಚಾಲಕನಿಗೆ ಪಿಡ್ಸ್ ಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ಬೆಂಗಳೂರು ಸಮೀಪದ ಮಡಕಶಿರದ ಮಾರುತಿನಗರದ ಬಳಿ ನಡೆದಿದೆ.
ನೆಲಮಂಗಲ ಡಿಪೋದ ಚಿತ್ರದುರ್ಗ ವಿಭಾಗಕ್ಕೆ ಸೇರಿದ KA-57F4409 ನಂಬರ್ ಕೆಎಸ್ಆರ್ಟಿಸಿ ಬಸ್ ಪಾವಗಡದಿಂದ ಬೆಂಗಳೂರಿಗೆ ಡಿಸೆಂಬರ್ 25ರಂದು ತೆರಳುತ್ತಿತ್ತು. ಈ ವೇಳೆ, ಮಧ್ಯಾಹ್ನ 3ಗಂಟೆ ಸುಮಾರಿಗೆ ಚಾಲಕ ಪಿಡ್ಸ್ನಿಂದ ಬಳಲು ಪ್ರಾರಂಭಿಸಿದ್ದಾರೆ. ಹೀಗಾಗಿ, ರಸ್ತೆಯ ಪಕ್ಕ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಬಸ್ ಒಂದು ಗೂಡ್ಸ್ ಆಟೋ ಮತ್ತು ಬೈಕ್ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಈ ಬಸ್ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಯಾರಿಗೂ ಕೂಡ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಬಸ್ ಡಿಕ್ಕಿ ಹೊಡೆದ ರೈತ ನಾರಾಯಣ ಅವರ ತಲೆಗೆ ತೀವೃ ಗಾಯವಾಗಿದೆ. ಅವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೈತ ನಾರಾಯಣ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ರೈತನನ್ನ ಕಾಣಲು ಕೆಎಸ್ಆರ್ಟಿಸಿಯ ಯಾವುದೇ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ರೈತನಿಗೆ ನಿಗಮದ ಕಡೆಯಿಂದ ಯಾವುದೇ ರೀತಿಯ ಸಹಾಯ ಕೂಡ ಆಗಿಲ್ಲ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಣ್ಣಾಮಲೈ ಚಾಟಿ ಏಟು ಪ್ರಕರಣ | ಸ್ತ್ರೀ ಕುಲದ ರಕ್ಷಣೆಗಾಗಿ ವಿನೂತನ ಪ್ರತಿಭಟನೆ: ಬಿ ವೈ ವಿಜಯೇಂದ್ರ
ಈ ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಘಟನೆ ಕುರಿತಂತೆ ಮಡಕಶಿರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ.