ಮಳೆಯ ಅಭಾವದಿಂದ ದನಕರುಗಳಿಗೆ ಮೇವಿಲ್ಲದಂತಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗದ ರೈತರು ಮೇವು ಖರೀದಿಗಾಗಿ ನೆರೆಯ ರಾಜ್ಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಹೋಗುತ್ತಿದ್ದಾರೆ. ಅನಂತಪುರ ಭಾಗದ ರೈತರು ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದು, ಭತ್ತದ ಹುಲ್ಲು ದೊರೆಯುತ್ತದೆ ಎಂದು ತಿಳಿದುಬಂದಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೇವು ಮತ್ತು ನೀರಿನ ಕೊರತೆ ತೀವ್ರವಾಗಿದೆ. ಬರದಿಂದಾಗಿ ಜನರಷ್ಟೇ ಅಲ್ಲದೆ, ದನ-ಕರು, ಕುರಿ, ಮೇಕೆಗಳು ಸಹ ಸಂಕಷ್ಟಕ್ಕೆ ಸಿಲುಕಿವೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, “ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಹರಿಸಲು ಯಾವುದೇ ಹಣಕಾಸಿನ ಕೊರತೆ ಇಲ್ಲ. ಜಾನುವಾರುಗಳನ್ನು ರಕ್ಷಿಸಲು, ಗೋಶಾಲೆಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ” ಎಂದಿದ್ದಾರೆ.
ರಂಗಯ್ಯನದುರ್ಗ ಅಣೆಕಟ್ಟು ತುಂಬಿದೆ. ಪೆರ್ಲಗುಡ್ಡದ ಗೊರ್ಲಮಾರೆ, ಬೋಡಿಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ, ನಮ್ಮ ಭಾಗದ ರೈತರಿಗೆ ಅದು ಉಪಯೋಗವಾಗುತ್ತಿಲ್ಲ. ಆಂಧ್ರಪ್ರದೇಶಕ್ಕೆ ನೀರು ಹರಿದು ಹೋಗುತ್ತಿದೆ. ಅಲ್ಲಿನ ರೈತರಿಗೆ ಭತ್ತ ಹಾಗೂ ಶೇಂಗಾ ಬೆಳೆ ಬೆಳೆಯಲು ಅವಕಾಶ ಹೆಚ್ಚಿದೆ. ಆದರೆ, ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲೂಕಿನಲ್ಲಿ ಸಾಮಾನ್ಯ ವರ್ಷದಲ್ಲಿ ಯಥೇಚ್ಛವಾಗಿ ಮೇವು ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ.
ಆಂಧ್ರಪ್ರದೇಶದಿಂದ ಮೇವು ಖರೀದಿಸಲು ದೊಡ್ಡ ಮೊತ್ತದ ಹಣ ತೆತ್ತಿದ್ದಾರೆ. ಟ್ರ್ಯಾಕ್ಟರ್ ಗೆ ಮೂರರಿಂದ ನಾಲ್ಕು ಸಾವಿರ ರೂ.ಗೆ ಸಿಗುತ್ತಿದ್ದ ಭತ್ತದ ಹುಲ್ಲು ಈಗ ಐದರಿಂದ ಆರು ಸಾವಿರ ರೂ. ಆಗಿದೆ. ಹತ್ತರಿಂದ 12 ಸಾವಿರ ರೂ.ಗೆ ಮಾರಾಟವಾಗುತ್ತಿದ್ದ ಶೇಂಗಾ ಹೊಟ್ಟು, 20ರಿಂದ 25 ಸಾವಿರ ರೂ. ಆಗಿದೆ. ಹೆಚ್ಚಿನ ಹಣ ನೀಡಿ ಜಾನುವಾರುಗಳಿಗೆ ಮೇವು ಹಾಕುವ ಸ್ಥಿತಿ ಜಿಲ್ಲೆಯ ರೈತರದ್ದು. ಇನ್ನೂ ಕೆಲವು ರೈತರು ಕುರಿ, ಮೇಕೆಗಳನ್ನು ಸಾಕಲಾಗದೆ ಮಾರಿದ್ದಾರೆ.
ಜಿಲ್ಲಾಡಳಿತ ರೈತರಿಗೆ ಮೇವಿನ ಕಿಟ್ ವಿತರಿಸಿ ಮೇವು ಬೆಳೆಯಬೇಕು. ನಿಂತ ನೀರಿಲ್ಲ. ಆದರೆ, ಮೇವು ಬೆಳೆಯಲು ಸಾಕಷ್ಟು ತೇವಾಂಶವಿರುವಲ್ಲಿ ಮೇವು ಬೆಳೆಯಲು ನರೇಗಾ (MGNREGA) ಕಾರ್ಯಕರ್ತರನ್ನು ಬಳಸಿಕೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ರೈತರು.