ಮಹಾರಾಷ್ಟ್ರದ ಠಾಣೆ ನಗರದಲ್ಲಿ ಮಾದಕ ದ್ರವ್ಯ ಸಾಗಣೆ ಆರೋಪದಲ್ಲಿ ಬಂಧಿತನಾಗಿರುವ, ಕಲಬುರಗಿ ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಅಲಗೂಡ (ಕಣ್ಣಿ) ಅವರನ್ನು ಸೋಮವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಅಲ್ಲಿನ ಬಜಾರ್‌ಪೇಟ್ ಠಾಣೆ ಪೊಲೀಸರು ಲಿಂಗರಾಜ ಸೇರಿ ಮೂವರನ್ನು ಮಾದಕ ದ್ರವ್ಯ ಸಾಗಣೆ ಆರೋಪದಲ್ಲಿ ಈಚೆಗೆ ಬಂಧಿಸಿರುವುದು ಭಾನುವಾರ ಚರ್ಚೆಗೆ ಆಸ್ಪದವಾಗಿತ್ತು. ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
‘ಲಿಂಗರಾಜ ಕಣ್ಣಿ ಅವರು ಮಾದಕ ದ್ರವ್ಯ ಸಾಗಣೆಯಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.