ಮದ್ಯ ಸೇವಿಸಿ ಕೆರೆಯಲ್ಲಿ ಈಜಲು ಹೋಗಿ ಸುಮಾರು 22ರ ಹರೆಯದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪೂರ್ವ ಬೆಂಗಳೂರು ಪ್ರದೇಶದಲ್ಲಿ ಭಾನುವಾರ ನಡೆದಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮೃತರನ್ನು ನೇಪಾಳ ಮೂಲದ ಅನಿಲ್ ಎಂದು ಗುರುತಿಸಲಾಗಿದೆ. ನಗರದಲ್ಲಿ ಹೌಸ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಅನಿಲ್ ನೀರಿನಲ್ಲಿ ಮುಳುಗಿ ಹೋಗುವ ದೃಶ್ಯವನ್ನು ಆತನ ಸ್ನೇಹಿತರೊಬ್ಬರು ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದ ರೀಲ್‌ಗಾಗಿ ಈ ವಿಡಿಯೋವನ್ನು ಮಾಡಲಾಗಿದ್ದು, ಆದರೆ ಈ ವೇಳೆ ಅನಿಲ್ ನೀರಿನಲ್ಲಿ ಮುಳುಗಿರುವುದು ಸೆರೆಯಾಗಿದೆ.
ಮನೆಗೆಲಸ ಮಾಡುವ ದಿನೇಶ್ ಮತ್ತು ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುವ ಉಪೇಂದ್ರ ಎಂಬ ಇಬ್ಬರು ಗೆಳೆಯರೊಂದಿಗೆ ಅನಿಲ್ ಸಂಜೆ 4 ಗಂಟೆಗೆ ಪಾಣತ್ತೂರು ಕೆರೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಬಟ್ಟೆ ತೊಳೆಯಲು ಹೋಗಿದ್ದ ವ್ಯಕ್ತಿ ಭೀಮಾ ನದಿಯಲ್ಲಿ ಮುಳುಗಿ ಸಾವು
ಮೂವರೂ ನೇಪಾಳ ಮೂಲದವರಾಗಿದ್ದು, ಕೆಲಸ ಹುಡುಕಿಕೊಂಡು ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಮೂವರು ಮದ್ಯ ಸೇವನೆ ಮಾಡಿ ಕೆರೆಗೆ ಈಜಲು ಹೋಗಿದ್ದರು. ಅನಿಲ್ ಮತ್ತು ದಿನೇಶ್ ಈಜಿದರೆ, ಉಪೇಂದ್ರ ಕೆರೆ ದಡದಲ್ಲೇ ಕುಳಿತಿದ್ದರು ಎಂದು ವರದಿಯಾಗಿದೆ.
“ಈಜು ತಿಳಿದಿದ್ದರೂ ಕೂಡಾ ಮದ್ಯಪಾನದಿಂದಾಗಿ ಅನಿಲ್‌ಗೆ ಈಜಲು ಸಾಧ್ಯವಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇನ್ನು ಈಗಾಗಲೇ ಇತ್ತೀಚೆಗೆ ನಡೆದ ಅಪಘಾತ ಒಂದರಲ್ಲಿ ಅನಿಲ್ ತಲೆಗೆ ಸಣ್ಣ ಗಾಯವಾಗಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
