ರಾಜ್ಯದಲ್ಲಿ ಒಣದ್ರಾಕ್ಷಿಯ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಕೆ.ಜಿಗೆ 90-140 ರೂ.ಗೆ ಮಾರಾಟವಾಗುತ್ತಿದೆ. ಇದರಿಂದಾಗಿ, ದ್ರಾಕ್ಷಿ ಬೆಳೆಯುವ ರೈತರು ನಷ್ಟದ ಸುಳಿಯಲ್ಲಿ ಸಿಲುಕಿಕೊಳ್ಳುವ ಆತಂಕದಲ್ಲಿದ್ದಾರೆ.
ರಾಜ್ಯ ಮತ್ತು ನೆರೆಯ ರಾಜ್ಯ ಮಹಾರಾಷ್ಟ್ರದ ಮಾರುಕಟ್ಟೆಗಳಲ್ಲಿ 180ರಿಂದ 300 ರೂ.ವರೆಗೆ ಮಾರಾಟವಾಗುತ್ತಿದ್ದ ಒಣದ್ರಾಕ್ಷಿ, ಈಗ ಬರೋಬ್ಬರಿ 50% ಕುಸಿತ ಕಂಡಿದೆ ಎಂದು ವರದಿಯಾಗಿದೆ. ಇನ್ನೂ ಬೆಲೆ ಕುಸಿಯುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ. ಉತ್ತಮ ಬೆಲೆ ಮತ್ತು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ ಎದುರಾಗಿದೆ.
“ಈಗಾಗಲೇ ದ್ರಾಕ್ಷಿ ಬೆಳೆಯಲು ಎಕರೆಗೆ ಸರಾಸರಿ 2 ಲಕ್ಷ ರೂ. ವೆಚ್ಚವಾಗುತ್ತಿದೆ. ಈಗಿರುವ ಬೆಲೆಯಲ್ಲಿ ಬಂಡವಾಳವೂ ವಾಪಸ್ ಬರುವಂತೆ ಕಾಣುತ್ತಿಲ್ಲ. ಇನ್ನು, ಕೋಲ್ಡ್ ಸ್ಟೋರೇಜ್‌ಗೆ ಬಾಡಿಗೆ ಕಟ್ಟಿ, ಒಣದ್ರಾಕ್ಷಿಯನ್ನು ಶೇಖರಿಸಿಡುವ ಪರಿಸ್ಥಿತಿಯಲ್ಲೂ ನಾವಿಲ್ಲ. ದಿಕ್ಕು ತೋಚದಾಗಿದೆ” ಎಂದು ದ್ರಾಕ್ಷಿ ಬೆಳೆಗಾರರು ಅವಲತ್ತುಕೊಂಡಿದ್ದಾರೆ.
“ದ್ರಾಕ್ಷಿ ಬೆಳೆಯುವ ರೈತರನ್ನು ಸರ್ಕಾರ ಕೈಹಿಡಿಯಬೇಕು. ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸಬೇಕು. ಸರ್ಕಾರವೇ ಬೆಂಬಲ ಬೆಲೆಯಲ್ಲಿ ಖರೀದಿಸಿ ಅಂಗನವಾಡಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ವಿತರಿಸಬೇಕು. ಇದರಿಂದ ರೈತರಿಗೂ, ಮಕ್ಕಳಿಗೂ ನೆರವಾದಂತಾಗುತ್ತದೆ” ಎಂದು ರೈತರು ಹೇಳಿದ್ದಾರೆ.