ಸಂಸತ್ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿರುವ, ʼಅಂಬೇಡ್ಕರ್ ಹೆಸರು ವ್ಯಸನವಾಗಿದೆ. ಅದರ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗ ಸಿಗುತ್ತಿತ್ತುʼ ಎಂಬ ಹೇಳಿಕೆಯನ್ನು ಖಂಡಿಸಿ ಜನವರಿ 23ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಸಾಂಸ್ಕೃತಿಕ ಸಂಚಾಲಕ ಬಿ ವಿ ಆನಂದ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಮಿತ್ ಶಾ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗಡಿಪಾರಾದ ವ್ಯಕ್ತಿ. ಸಂವಿಧಾನದ ಆಧಾರದಲ್ಲಿ ಅಧಿಕಾರಕ್ಕೇರಿ ಇದೀಗ ಅಂಬೇಡ್ಕರ್ ಅವರನ್ನೇ ಅವಮಾನ ಮಾಡುತ್ತಿರುವ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕು. ಜತೆಗೆ ಅವರನ್ನು ಸಚಿವ ಸಂಪುಟ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ನಾವೆಲ್ಲರೂ ಬೆಂಬಲ ಕೊಡುತ್ತಿದ್ದೇವೆ. ಅಮಿತ್ ಶಾ ಅವರು ಜವಾಬ್ದಾರಿಯುತವಾಗಿ ವರ್ತಿಸಬೇಕು” ಎಂದು ಹೇಳಿದರು.
ದಲಿತ ಮುಖಂಡ ಕೆ ಜೆ ಮುನಿರಾಜು ಮಾತನಾಡಿ, “ಮಣಿಪುರದಲ್ಲಿ ಸಾಮೂಹಿಕ ಅತ್ಯಾಚಾರವಾದರೂ ಮೋದಿಯವರು ಧ್ವನಿ ಎತ್ತುವುದಿಲ್ಲ. ಸೌಜನ್ಯ ಪ್ರಕರಣದಲ್ಲಿಯೂ ಕ್ರಮಕ್ಕೆ ಮುಂದಾಗಿಲ್ಲ. ʼಬೇಟಿ ಬಚಾವೋ ಬೇಟಿ ಪಡಾವೋʼ ಎಂದು ಹೇಳುವ ಮೋದಿ, ಬೇಟಿಯರ ಮೇಲೆ ಅತ್ಯಾಚಾರವಾದರೂ ಕ್ರಮಕ್ಕೆ ಮುಂದಾಗುವುದಿಲ್ಲ” ಎಂದು ಕಿಡಿಕಾರಿದರು.

“ಮೋದಿಯವರಿಗೆ ಮತ ನೀಡುವ ಹಕ್ಕು ನೀಡಿದ್ದು ಸಂವಿಧಾನ. ಆದರೆ ಅಮಿತ್ ಶಾ ಹೇಳಿಕೆಯನ್ನು ಈವರೆಗೆ ಖಂಡಿಸಿಲ್ಲ. ಬ್ರಿಜ್ ಭೂಷಣ್ ಸಿಂಗ್ ಅವರ ನಡೆಯನ್ನೂ ಕೂಡ ಮೋದಿ ಸಮರ್ಥಿಸಿಕೊಂಡಿದ್ದಾರೆ. ಮಹಿಳೆಯರ ವಿಚಾರದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವವರ ಪರವಾಗಿ ಮೋದಿ ಮತ್ತು ಅಮಿತ್ ಶಾ ನಿಂತಿದ್ದಾರೆ. ಸಂವಿಧಾನ ಬದಲಾವಣೆಯೇ ಅವರ ಮುಖ್ಯ ಉದ್ದೇಶವಾಗಿದೆ” ಎಂದರು.
“ಅಮಿತ್ ಶಾ ಅವರ ವಿರುದ್ಧ ಕ್ರಮವಾಗಬೇಕು. ಅಮಿತ್ ಶಾ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು ಮಾಡಬೇಕು. ಇಂಥವರನ್ನು ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ; ಅಮಾನವೀಯತೆ ಮೆರೆದ ಮಾಲೀಕ
ತಾಲೂಕು ಸಂಚಾಲಕ ಜಯಕುಮಾರ್ ಮಾತನಾಡಿ, “ಜನವರಿ 23ರಂದು ಫ್ರೀಡಂ ಪಾರ್ಕಿನಲ್ಲಿ ಸಂವಿಧಾನ ಮತ್ತು ಮನುವಾದದ ಕುರಿತು ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ನಮ್ಮ ಜಿಲ್ಲೆಯಿಂದ ಹೆಚ್ಚಿನ ಜನ ಭಾಗವಹಿಸುತ್ತಿದ್ದೇವೆ” ಎಂದು ತಿಳಿಸಿದರು.
ಮುಖಂಡ ನಡುಪಣ್ಣ ಮಾತನಾಡಿ, “ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದರೂ ಕೂಡಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ದೊಡ್ಡ ಮಟ್ಟದ ಪ್ರತಿಭಟನೆ ಕೈಗೊಳ್ಳಲಾಗಿದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಪಿಳ್ಳಪ್ಪ, ನರಸಿಂಹರಾಜ ಇದ್ದರು.