ಚೇಳೂರು ತಾಲೂಕು ಘೋಷಣೆಯಾಗಿ 5 ವರ್ಷಗಳಾದರೂ ಇಲಾಖಾವಾರು ಅಧಿಕಾರಿಗಳಿಲ್ಲ. ಇಲಾಖೆ ಕಚೇರಿಗಳೂ ಇಲ್ಲ. ನಾಮಕಾವಸ್ತೆಗಷ್ಟೇ ಭೂಮಿ ಶಾಖೆ ಉದ್ಘಾಟನೆಯಾಗಿದ್ದು, ನೋಂದಣಿಗಳು ಆಗುತ್ತಿಲ್ಲ. ರೈತರಿಗೆ ಪಹಣಿ ಸಿಗುತ್ತಿಲ್ಲ. ಕೂಡಲೇ ತಾಲೂಕಿನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ದಸಂಸ ಸಂಚಾಲಕ ಜಿ ನರಸಿಂಹಪ್ಪ ಕಿಡಿಕಾರಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕು ಕಚೇರಿ ಮುಂಭಾಗ ಭೂಮಿ, ನಿವೇಶನ, ರಸ್ತೆ, ಸ್ಮಶಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಸಂಸ ತಾಲೂಕು ಘಟಕ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚೇಳೂರು ತಾಲ್ಲೂಕಿಗೆ ಬರುವ 17 ಕಂದಾಯ ವೃತ್ತಗಳ ಹಳೇ ಮೂಲ ದಾಖಲಾತಿಗಳು ಬಂದಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ಜನತೆಗೆ ಸೂಕ್ತ ಸೌಲಭ್ಯಗಳು ದೊರೆಯುತ್ತಿಲ್ಲ. ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಯನ್ನು ಕೂಡಲೇ ಮೇಲ್ದರ್ಜೆಗೇರಿಸಬೇಕು. ಜನ ಜಾನುವಾರುಗಳ ಕುಡಿಯವ ನೀರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚೇಳೂರು ಪಾಪಾಗ್ನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕು. ದಲಿತರು ದಲಿತರಾಗಿಯೇ ಉಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ಶ್ರೀನಿವಾಸ್ ನಾಯ್ಡು, ಹಂತ ಹಂತವಾಗಿ ಕಛೇರಿಗಳು ಪ್ರಾರಂಭವಾಗಲಿವೆ. ಹಳೇ ದಾಖಲೆಗಳ ಬರಲು ಡಿಸಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಬಾಗೇಪಲ್ಲಿ | ಲಂಚ; ಪುರಸಭೆ ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ
ಧರಣಿ ವೇಳೆ ಜನನಾಟ್ಯ ಮಂಡಳಿಯ ಕಲಾವಿದ ಸಿ.ಜಿ.ಶಿವಣ್ಣ ಕ್ರಾಂತಿ ಗೀತೆಗಳನ್ನು ಹಾಡಿದರು.
ಧರಣಿಯಲ್ಲಿ ಆರ್.ನರಸಿಂಹಪ್ಪ, ಶ್ರೀನಿವಾಸ್, ಟಿ.ಎನ್.ಸೀನಪ್ಪ, ಎಂ.ಈಶ್ವರ್, ಡಿ.ವಿ.ವೆಂಕಟೇಶ, ವೆಂಕಟರಮಣಪ್ಪ, ಜಿ.ಮಂಜುನಾಥ್, ನಾಗರಾಜ್, ಆದಿ ನಾರಾಯಣಪ್ಪ, ಅಂಕಾಲಪ್ಪ, ಎ.ಆದಿನಾರಾಯಣ ಸೇರಿದಂತೆ ಇತರರಿದ್ದರು.