ದಲಿತರ ಭೂಮಿ ವಸತಿ ಹಕ್ಕಿಗಾಗಿ ಹಕ್ಕೋತ್ತಾಯಿಸಿ ಪ್ರತಿಭಟನಾ ಧರಣಿಯನ್ನು ದಸಂಸ (ಅಂಬೇಡ್ಕರ್ ವಾದ ) ವತಿಯಿಂದ ಶುಕ್ರವಾರ ರಾಜ್ಯದ್ಯಂತ ಪ್ರತಿಭಟನೆ ನಡೆಸಲು ಕರೆ ಕೊಡಲಾಗಿದೆ. ಹಾಗೆಯೇ, ಚಿಕ್ಕಮಗಳೂರು, ಮೂಡಿಗೆರೆ, ಕಳಸ ಭಾಗದಲ್ಲಿ ಪ್ರತಿಭಟನಾ ಧರಣಿಯನ್ನು ಕೈಗೊಳ್ಳಲಾಗಿದೆ.
ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂಹೀನ ಬಡ ರೈತರು ಫಾರಂ ನಂ. 50, 53, 57ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಸರ್ಕಾರ ಶಾಸಕರ ಸಮಿತಿಯನ್ನು ನೇಮಿಸಿದ್ದರೂ, ಇದುವರೆಗೂ ನಮ್ಮ ಶಾಸಕರು ಸಭೆ ಕರೆಯದೇ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಹಾಗೆಯೇ, ಪಿಟಿಸಿಎಲ್ ಕಾಯ್ದೆ ಪ್ರಕಾರ ಜಮೀನುಗಳನ್ನು ಕೈಬಿಡುವಂತೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನಲ್ಲಿ ಸಾವಿರಾರು ಸಂಖ್ಯೆಯ ನಿವೇಶನ ರಹಿತರಿದ್ದು, ಅವರಿಗೆ ನಿವೇಶನ, ಮಸಣಕ್ಕೆ ಭೂಮಿ ನೀಡಲು ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಧರಣಿ ಕೈಗೊಳ್ಳಲಾಗಿದೆ ಎಂದು ದಸಂಸ ಮಹಿಳಾ ಮುಖಂಡರಾದ ಆಶಾ ಸಂತೋಷ್ ಈದಿನ.ಕಾಮ್ ಗೆ ಮಾಹಿತಿ ತಿಳಿಸಿದ್ದಾರೆ.