ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ ವತಿಯಿಂದ ನಾಳೆ ಜುಲೈ 18 ರಂದು ಬೆಳಿಗ್ಗೆ ಗಂಟೆ 11-00 ರಿಂದ ಜಿಲ್ಲೆಯ ಎಲ್ಲಾ ಏಳೂ ತಾಲೂಕು ಕಚೇರಿಗಳ ಮುಂದೆ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ತಾಲೂಕು ಕಚೇರಿಗಳ ಮುಂದೆ ಅದೇ ದಿನ ದಲಿತರ ಭೂಮಿ ಮತ್ತು ವಸತಿ ಹಕ್ಕಿಗೆ ಆಗ್ರಹಿಸಿ ರಾಜ್ಯ ಸಮಿತಿಯ ಕರೆಯ ಮೇರೆಗೆ ನಡೆಯುವ ಪ್ರತಿಭಟನೆಯ ಭಾಗವಾಗಿ ಈ ಪ್ರತಿಭಟನೆ ನಡೆಯಲಿದ್ದು,ಸಂಘಟನೆಯ ಆಯಾಯ ತಾಲೂಕು ಸಮಿತಿಗಳು ಅವರವರ ತಾಲೂಕುಗಳಲ್ಲಿ ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.ಪ್ರತಿಭಟನೆಯಲ್ಲಿ ರಾಜ್ಯ ಮಟ್ಟದ ಭೂಮಿ ಮತ್ತು ವಸತಿ ಹಕ್ಕಿನ ಜೊತೆಗೆ ಉಡುಪಿ ಜಿಲ್ಲೆಯ ಡಿ.ಸಿ.ಮನ್ನಾ ಭೂಮಿ ಮರುಹಂಚಿಕೆ,ಜಿಲ್ಲೆಯ ಅಕ್ರಮ-ಸಕ್ರಮ ಸಮಿತಿಗಳು ದಲಿತರ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಬೇಕು ಎಂಬ ಹಕ್ಕೊತ್ತಾಯವನ್ನು ಸೇರಿಸಿಕೊಳ್ಳಲಾಗಿದೆ ಎಂದವರು ತಿಳಿಸಿರುತ್ತಾರೆ.

ಸಂಘಟನೆಯ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ,ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು,ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಶಾಮ ಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ಅಣ್ಣಪ್ಪ ನಕ್ರೆ, ದೇವು ಹೆಬ್ರಿ, ಭಾಸ್ಕರ್ ನಿಟ್ಟೂರು ತಾಲೂಕು ಸಂಚಾಲಕರುಗಳಾದ ಕೆ.ಸಿ.ರಾಜು ಬೆಟ್ಟಿನಮನೆ, ಕುಂದಾಪುರ, ಶಿವರಾಜ್ ಬೈಂದೂರು, ಹರೀಶ್.ಕೆ.ಡಿ.ಬ್ರಹ್ಮಾವರ, ಶಂಕರ್ ದಾಸ್ ಚೆಂಡ್ಕಳ, ಉಡುಪಿ, ಅಣ್ಣಪ್ಪ ಮಾಸ್ತರ್, ಹೆಬ್ರಿ, ರಾಜೇಂದ್ರ ಮಾಸ್ತರ್, ಕಾಪು ಮತ್ತು ಹೂವಪ್ಪ ಮಾಸ್ಟರ್ ಕಾರ್ಕಳ ಪ್ರತಿಭಟನೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂಬ ವಿವರ ನೀಡಿರುತ್ತಾರೆ.
ಜಿಲ್ಲೆಯ ಎಲ್ಲಾ ಜಾತಿಯ ಬಡವರು, ದಲಿತರು ಭೂಮಿ ಹಕ್ಕು ಪಡೆಯಲು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುಂದರ್ ಮಾಸ್ತರ್ ಕೋರಿಕೊಂಡಿದ್ದಾರೆ.