ಬೊಮ್ಮಾಯಿ ಅವರು ಲಮಾಣಿ ತಾಂಡಾಗಳನ್ನು ಅಭಿವೃದ್ಧಿ ಗೊಳಿಸುವ ಕಾರ್ಯ ಮಾಡಿಲ್ಲ. ಮಳೆ ಬಂದಾಗ ಮನೆ ಕೊಟ್ಟಿದ್ದು ಬಿಟ್ಟರೆ ಬೇರೆ ಎಲ್ಲಿಯೂ ಮನೆಗಳನ್ನು ಬೊಮ್ಮಾಯಿ ಕೊಟ್ಟಿಲ್ಲ. ಅದರಲ್ಲೂ ಬಂಜಾರಾ ಸಮುದಾಯಕ್ಕೆ ಬೊಮ್ಮಾಯಿ ಕಡೆಯಿಂದ ದೊಡ್ಡ ದ್ರೋಹವಾಗಿದೆ ಎಂದು ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಸೋಮವಾರ ಪಟ್ಟಣದ ಚುನಾವಣಾ ಸಂಪರ್ಕ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೋದಿಯವರು ಬಾಯಿ ಮಾತಿನಲ್ಲಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ. ಆದರೆ ರೂಢಿಯಲ್ಲಿ ಮಾತ್ರ ಬಿಜೆಪಿ ಸರ್ಕಾರ ಬಡವರನ್ನು ತಿರುಗಿಯೂ ನೋಡುವುದಿಲ್ಲ. ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಕುಡಿಯುವ ನೀರಿನ ಕೆಲಸವನ್ನೂ ಮಾಡಿಲ್ಲ.ಮತ್ತು ಬಂಜಾರಾ ಸಮುದಾಯಗಳ ಅಭಿವೃದ್ಧಿಗೊಳಿಸುವ ಒಂದು ಯೋಜನೆಯನ್ನೂ ಜಾರಿ ಮಾಡಲಿಲ್ಲ. ಆದ್ಧರಿಂದ ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಎಲ್ಲ ಲಮಾಣಿ ತಾಂಡಾಗಳಿಗೆ ಹಕ್ಕು ಪತ್ರ ವಿಧಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರದ ವತಿಯಿಂದ ಮಾಡುತ್ತೇವೆ ಎಂದರು.
ಈ ವರದಿ ಓದಿದ್ದೀರಾ? ಹಾವೇರಿ | ಕಸಾಪ ಯುವ ಜನಾಂಗವನ್ನು ಹೆಚ್ಚು ಗಮನ ಸೆಳೆಯಬೇಕು: ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ
ಮಾಜಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಂಜಾರಾ ಸಮಾಜಕ್ಕೆ ದ್ರೋಹವಾಗಿದ್ದು, ಕಾಂಗ್ರೆಸ್ ಪಕ್ಚಕ್ಕೆ ನಮ್ಮ ಸಮುದಾಯ ಚಿರಋಣಿ ಆಗಿರುತ್ತದೆ. ನಮಗೆ ಮೀಸಲಾತಿಯನ್ನು ಕಾಂಗ್ರೆಸ್ ಒದಗಿಸಿದೆ. ನಮ್ಮ ಧರ್ಮಗುರು ಸೇವಾಲಾಲ್ ಜಯಂತಿಯನ್ನು ಸರ್ಕಾರದ ವತಿಯಿಂದ ಮಾಡುವಂತೆ ಚಾಲನೆಗೆ ಸಿಎಂ ಸಿದ್ದರಾಮಯ್ಯ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸಮುದಾಯದ ಪಾಲಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದೊಡ್ಡ ದ್ರೋಹ ಮಾಡಿದ್ದಾರೆ. ಇವತ್ತು ಬಂಜಾರಾ ಸಮುದಾಯದಿಂದ ಬೊಮ್ಮಾಯಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬೆಂಬಲ ಸೂಚಿಸುತ್ತೇವೆ ಎಂದರು.