ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಆದಿಜಾಂಬವ ಜನಾಂಗದ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ, ಬೊಮ್ಮಾಯಿ ವಿರುದ್ಧ ಮತ ಚಲಾಯಿಸಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ನಿರ್ಧಾರ ಕೈಗೊಂಡರು.
ಸಮುದಾಯದ ಮುಖಂಡ ಬಸವವಂತಪ್ಪ ಮಾತನಾಡಿ, ಈಗಾಗಲೆ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಒಳಮೀಸಲಾತಿ ಜಾರಿ ಮಾಡುವ ಶಕ್ತಿ ಇರುವುದು ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ. ಈ ವಿಚಾರದಲ್ಲಿ ಬಿಜೆಪಿ ನಮಗೆ ಸುಳ್ಳು ಹೇಳುತ್ತದೆ. ಆದ್ದರಿಂದ ಶಿಗ್ಗಾವಿ ಚುನಾವಣೆಯಲ್ಲಿ ಮಾದಿಗರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ಸಮಾನವಾಗಿ ನೀಡಿದೆ. ಒಳಮೀಸಲಾತಿ ಜಾರಿಯಾದರೆ ಸುಮಾರು ಒಂದು ಸಾವಿರ ಹುದ್ದೆಗಳು ಮಾದಿಗರ ಪಾಲಾಗಲಿವೆ.
ಬಿಜೆಪಿಯು ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕುತಂತ್ರ ಮಾಡುತ್ತಿದೆ. ನಂತರ ದಲಿತರನ್ನು ಮುಂದಿಟ್ಟುಕೊಳ್ಳುತ್ತಾರೆ. ಬಸವಣ್ಣ ಅಪ್ಪನ ನಮ್ಮ ಮಾದಾರ ಚನ್ನಯ್ಯ ಎಂದಿದ್ದಾರೆ. ಅಂತಹ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಕಾಂಗ್ರೆಸ್ ಗೆದ್ದರೆ ಮಾದಿಗರಿಗೆ ಮೊದಲ ಗೌರವ ಸಿಗುತ್ತದೆ ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಮಾದಿಗರು ಈ ದೇಶದ ಮೂಲನಿವಾಸಿಗಳು. ರಾಜ್ಯ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಾದಿಗರ ಕೊಡುಗೆ ಅಪಾರ. ಸರ್ವರಿಗೂ ಸಮಪಾಲು ಎಂಬ ತತ್ವಕ್ಕೆ ಕಾಂಗ್ರೆಸ್ ಬದ್ದವಾಗಿದೆ. ಒಳಮೀಸಲಾತಿ ಜಾರಿಯಾದರೆ ಬುದ್ಧ, ಬಸವ, ಅಂಬೇಡ್ಕರ್ ಕನಸು ನನಸಾದಂತೆ ಆಗುತ್ತದೆ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದು, ಒಳಮೀಸಲಾತಿ ಯಾವುದೇ ಪರಿಸ್ಥಿಯಲ್ಲೂ ಜಾರಿ ಆಗುತ್ತದೆ. ಬಿಜೆಪಿಯವರದ್ದು ಸುಳ್ಳೇ ಅವರ ಮನೆ ದೇವರಾಗಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಮುಡಮೇಲು ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ಪ್ರಯೋಜನ ಆಗುವುದಿಲ್ಲ ಎಂದರು.
ಯತೀಂದ್ರ ಸಿದ್ಧರಾಮಯ್ಯ ಮಾತನಾಡಿ, ಶತಮಾನಗಳಿಂದಲೂ ದಲಿತರನ್ನು ತುಳಿಯುವ ಪ್ರಯತ್ನಗಳು ನಡೆದೇ ಇವೆ. ಇವತ್ತಿಗೂ ದಲಿತರು ಮುಖ್ಯವಾಹಿಗೆ ಬರುತ್ತಿಲ್ಲ. ಸಂಘಪರಿವಾರದ ಅಂಗಸಂಸ್ಥೆಯಾದ ಬಿಜೆಪಿಯು ಜಾತಿ ವ್ಯವಸ್ಥೆಯನ್ನೇ ಮುಂದುವರೆಸಬೇಕೆಂಬ ಉದ್ದೇಶದಿಂದ ಬಡವರನ್ನು ತುಳಿಯುವ ಪ್ರಯತ್ನದಲ್ಲೇ ಮುಳಿಗಿದೆ. ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಉತ್ತಮ ಯೋಜನೆಗಳನ್ನು ಜಾರಿ ತಂದಿದೆ. ಕೇಂದ್ರ ಬಿಜೆಪಿ ಸರ್ಕಾರ ಯಾಕೆ ಬಡವರಿಗಾಗಿ, ದಲಿತರಿಗಾಗಿ ಕಾನೂನು ತಂದಿಲ್ಲ? ಎಂದು ಪ್ರಶ್ನಿಸಿದರು.
ಕ್ಯಾಬಿನೆಟ್ ಸಚಿವ ಆರ್ ಬಿ ತಿಮ್ಮಾಪುರ ಮಾತನಾಡಿ, ಮಾದಿಗರೆಲ್ಲ ಒಂದಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ ಅನ್ನು ಗೆಲ್ಲಿಸಲು ಕರೆ ನೀಡಿದರು.
ಈ ವರದಿ ಓದಿದ್ದೀರಾ? ಶಿಗ್ಗಾವಿ ಉಪಚುನಾವಣೆ | ಬಂಜಾರಾ ಸಮುದಾಯಕ್ಕೆ ಬೊಮ್ಮಾಯಿ ಕೊಡುಗೆ ಶೂನ್ಯ: ರುದ್ರಪ್ಪ ಲಮಾಣಿ
ಕಾರ್ಯಕ್ರಮದಲ್ಲಿ ರಹಿಮಖಾನ್, ನಾಗರಾಜ ಯಾದವ್, ಅಜ್ಜಂಪೀರ ಖಾದ್ರಿ, ಅಹಿಂದ ಸಂಘಟಕರು, ಆದಿಜಾಂಬವ, ಮಾದಿಗ ಸಮುದಾಯದ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.