ಶಿವಮೊಗ್ಗದ ಗೋಪಾಲಗೌಡ ಬಡಾವಣೆ ಮತ್ತು ಅನುಪಿನಕಟ್ಟೆಯ ನಂತರ ಇರುವ ಗೋವಿಂದಾಪುರದ ಬಾಬು ಲೇಔಟ್‌ನ ನಿವಾಸಿಗಳು ಮೂಲಸೌಕರ್ಯವಿಲ್ಲದೆ ನರಳುತ್ತಿದ್ದ ನಿವಾಸಿಗಳಿಗೆ ಪಿಡಿಒ ಮತ್ತು ತಹಶೀಲ್ದಾರರು ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ.
ಅಲ್ಲಿಯ ನಿವಾಸಿಗಳು ಮೂಲಸೌಕರ್ಯದಿಂದ ವಂಚಿತರಾಗಿರುವುದನ್ನು ಕಂಡು ಈ ದಿನ.ಕಾಮ್ ನವೆಂಬರ್ 2 ರಂದು, ʼಶಿವಮೊಗ್ಗ | ಬಾಬು ಲೇಔಟ್‌ನಲ್ಲಿ ಮೂಲ ಸೌಕರ್ಯ ಕೊರತೆ; ನಿವಾಸಿಗಳ ಪರದಾಟʼ ಎಂಬ ತಲೆಬರಹದಡಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕಿಸಿದ್ದು, ಮೂಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ.
ಪಿಡಿಒ ಭಾಗ್ಯ ಈ ದಿನ.ಕಾಮ್ನೊಂದಿಗೆ ಮಾತನಾಡಿ, ಬಾಬು ಲೇಔಟ್‌ನ ಮಾಲೀಕರಿಂದ ಮತ್ತು ಅಲ್ಲಿಯ ನಿವಾಸಿಗಳಿಂದ ಸೌಲಭ್ಯಕ್ಕಾಗಿ ಮನವಿ ಕೊಡಿಸುವಂತೆ ತಿಳಿಸಿದ್ದು, ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ತಹಶೀಲ್ದಾರ್ ನಾಗರಾಜ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, ನಮ್ಮ ಕಚೇರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಬಾಬು ಲೇಔಟ್‌ನಲ್ಲಿ ಮೂಲಸೌಕರ್ಯ ಇಲ್ಲದಿರುವ ಕುರಿತು ಮಾಹಿತಿ ಪಡೆದು ಕೊಳ್ಳುತ್ತೇನೆ ಎಂದಿದ್ದರು. ಅಂತೆಯೇ ಸೋಮವಾರ ಬೆಳಿಗ್ಗೆ ಸಭೆ ನಡೆಸಿ ಬಾಬು ಲೇಔಟ್ ಮತ್ತು ಈ ದಿನ.ಕಾಮ್ ಸುದ್ದಿ ಕುರಿತು ಪ್ರಸ್ತಾಪಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಯವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, ಲೇಔಟ್ ಕುರಿತು ಪಿಡಿಒ ಜತೆಗೆ ಮಾತುಕತೆ ನಡೆಸಿ ವಿಷಯ ತಿಳಿಸುತ್ತೇವೆ. ಹಾಗೆಯೇ ಸ್ಥಳೀಯ ನಿವಾಸಿಗಳಿಂದ ಮೂಲ ಸೌಕರ್ಯ ಕುರಿತು ಮನವಿ ನೀಡಲು ತಿಳಿಸಿ” ಎಂದು ಸೂಚಿಸಿದ್ದಾರೆ.
“ಮೂಲಸೌಕರ್ಯ ಒದಗಿಸುವಂತೆ ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಡಲು ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ನಿವಾಸಿಗಳ ಜೀವನೋಪಾಯಕ್ಕೆ ಅನುಕೂಲವಾಗಲಿದೆಯೇ ಎಂದು ಕಾಯ್ದು ನೋಡಬೇಕು” ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸಿದರು.