ಆ ಪುಟ್ಟ ಗ್ರಾಮದಲ್ಲಿನ ರಸ್ತೆಗಳಲ್ಲಿ ಎಂದಿನಂತೆ ಓಡಾಡುತ್ತಿದ್ದವರು, ಈಗ ಯಾರೂ ಕಾಣುತ್ತಿಲ್ಲ. ಅಲ್ಲೊಂದಿಲ್ಲೊಂದು ವಯೋವೃದ್ಧರಷ್ಟೇ ಗ್ರಾಮದಲ್ಲಿ ಕಾಣ ಸಿಗುತ್ತಿದ್ದಾರೆ. ಇಡೀ ಗ್ರಾಮಕ್ಕೆ ಗ್ರಾಮವೇ ಮೌನಕ್ಕೆ ಶರಣಾಗಿದೆ. ಎಲ್ಲಿ ನೋಡಿದರೂ ಪೊಲೀಸರಷ್ಟೇ ಓಡಾಟ ನಡೆಸುತ್ತಿದ್ದಾರೆ. ಭಯಗೊಂಡಿರುವ ಗ್ರಾಮದ ಮಹಿಳೆಯರು ಮನೆಯಿಂದ ಹೊರಬರಲೂ ಭಯಗೊಂಡಿದ್ದಾರೆ.
ಹೌದು, ಈ ಎಲ್ಲ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ.
ರೈತರ ಆಸ್ತಿಯನ್ನು ವಕ್ಫ್ ಕಿತ್ತುಕೊಳ್ಳುತ್ತಿದೆ. ಅದಕ್ಕಾಗಿ ರೈತರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದು ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ನಡುವೆಯೇ ಕೆಲವು ದುಷ್ಕರ್ಮಿಗಳ ಗುಂಪು ಮುಸ್ಲಿಂ ಸಮುದಾಯದ ಮುಖಂಡರ ಮನೆಗಳನ್ನೇ ಗುರಿಯಾಗಿರಿಸಿ ಕಲ್ಲು ತೂರಾಟ, ಹಲ್ಲೆ ನಡೆಸಿದ ಘಟನೆ ಬುಧವಾರ ತಡರಾತ್ರಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ.

ಈ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 33 ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಕಡಕೋಳ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಈ ದಿನ.ಕಾಮ್ ತಂಡ ಕಡಕೋಳ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿತು. ಬುಧವಾರ ತಡರಾತ್ರಿಯ ಘಟನೆಯ ಬಳಿಕ, ಗ್ರಾಮದಲ್ಲಿದ್ದ ವಾಸಿಸುತ್ತಿದ್ದ ಸುಮಾರು 70ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ಗ್ರಾಮವನ್ನೇ ತೊರೆದಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು
ಗಲಾಟೆಯ ಸಂದರ್ಭದಲ್ಲಿ ಹಲವು ಮುಸ್ಲಿಮರ ಮನೆಗಳನ್ನೇ ಗುರಿಯಾಗಿರಿಸಿಕೊಂಡು ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು, ಹಲವು ಮನೆಯ ಕಿಟಕಿಗಳ ಗಾಜುಗಳನ್ನು ಪುಡಿಗಟ್ಟಿದ್ದಾರೆ. ಕೆಲವು ಮನೆಗಳಲ್ಲಿ ಮುಸ್ಲಿಂ ಮಹಿಳೆಯರು ವಾಸವಿದ್ದರೂ ಕೂಡ, ಧೈರ್ಯದಿಂದ ಮಾತನಾಡಲು ಭಯಪಡುತ್ತಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಕಡಕೋಳ ಗ್ರಾಮದ ಮುಸ್ಲಿಂ ಯುವತಿಯೋರ್ವಳು, “ನಿನ್ನೆ ರಾತ್ರಿ ಸುಮಾರು 7.30-8ರ ಸುಮಾರಿಗೆ ಬೇರೆ ಓಣಿಯ ಮಂದಿ ಮನೆಗೆ ನುಗ್ಗಿ ದಾಳಿ ಮಾಡಿದ್ದಾರೆ. ಸುಮಾರು 60ರಿಂದ 70 ಜನ ಗುಂಪಾಗಿ ನುಗ್ಗಿದ್ದಾರೆ. ನನ್ನ ತಂದೆಗೂ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ನನ್ನ ತಂದೆಯವರ ತಲೆಗೆ ಪೆಟ್ಟಾಗಿದೆ. ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಪಿನಲ್ಲಿದ್ದ ಕೆಲವು ಮಂದಿ ಮನೆಯಲ್ಲಿದ್ದ ಬಂಗಾರ, ಹಣವನ್ನು ದೋಚಿದ್ದಾರೆ” ಎಂದು ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.
ಈ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 30ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಗುರುವಾರ ಬೆಳಗ್ಗೆಯಿಂದಲೇ ಸವಣೂರು ಪೊಲೀಸ್ ಠಾಣೆಯ ಮುಂದೆ ಗ್ರಾಮಸ್ಥರು ಸಂಘಪರಿವಾರದ ಮುಖಂಡರು ಸೇರಿದ್ದರು.

ಈ ವೇಳೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಸುರೇಶ್, “ಕಡಕೋಳ ಗ್ರಾಮದ 61 ಮಂದಿಯ ಮನೆ ಹಾಗೂ ಎರಡು ವಕ್ಫ್‌ಗೆ ಸೇರಿದೆ ಎಂದು ಆದೇಶ ಬಂದಿದೆ ಎಂದು ಸುದ್ದಿ ಹರಡಿತ್ತು. ಇದಕ್ಕೆ ವಕ್ಫ್ ಕಮಿಟಿಯ ಮನವಿಯ ಮೇರೆಗೆ ಆದೇಶ ಆಗಿದೆ ಎಂದು ಗ್ರಾಮಸ್ಥರು ಪಂಚಾಯತ್‌ಗೆ ದೂರು ನೀಡಿದ್ದರು. ಈ ಬಗ್ಗೆ ನಾವು ಡಿಸಿ, ಎಸ್‌ಪಿಯವರ ಗಮನಕ್ಕೂ ತಂದಿದ್ದೆವು. ಗ್ರಾಮದ ಮಂದಿ ಆಸ್ತಿ ಹೋಗುವ ಭಯದಲ್ಲಿದ್ದಾರೆ ಎಂದು ತಿಳಿಸಿದ್ದೆವು. ಇದೇ ವಿಚಾರವಾಗಿ ನಿನ್ನೆ ಗ್ರಾಮದಲ್ಲಿ ಗಲಾಟೆ ಆಗಿದೆ. ಗಲಾಟೆ ನಡೆಯುತ್ತಿರಬೇಕಾದರೆ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ನಿಯಂತ್ರಿಸುವ ಬದಲು ವಿಡಿಯೋ ಮಾಡಿಕೊಂಡಿದ್ದರು. ಪೊಲೀಸರ ವೈಫಲ್ಯವೇ ಇದಕ್ಕೆ ಕಾರಣ” ಎಂದು ದೂರಿದರು.
“ನೂರಾರು ವರ್ಷಗಳಿಂದ ಇರುವ ದೇವಸ್ಥಾನದ ಜಾಗ ವಕ್ಫ್ ಜಾಗ ಎಂದು ಆದೇಶ ಬಂದಿದೆ ಎಂಬ ಸುದ್ದಿ ಹರಿದಾಡಿತ್ತು. ಜಿಲ್ಲೆಯಲ್ಲಿ ಉಪಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿರುವ ಸಚಿವ ಜಮೀರ್ ದ್ವೇಷ ಹರಡುತ್ತಿದ್ದಾರೆ” ಎಂದು ಗಂಗಾಧರ್ ಬಾನದ್ ಎಂಬುವವರು ಆರೋಪಿಸಿದ್ದಾರೆ.

ಸಂಘಪರಿವಾರದ ಮುಖಂಡ ಗಂಗಾಧರ್ ಶೇಟ್ ಎಂಬುವವರು ಮಾತನಾಡಿ, “ಈ ಘಟನೆಗೆ ವಕ್ಪ್ ಕಮಿಟಿ ನೀಡಿದ್ದ ಮನವಿಯೇ ಕಾರಣ. ಈ ಮನವಿಯ ಬಗ್ಗೆ ಗ್ರಾಮದ ಕೆಲವರು ಮುಸ್ಲಿಂ ಮುಖಂಡರಲ್ಲಿ ಪ್ರಶ್ನೆ ಮಾಡಲು ಕೇಳಲು ಹೋದಾಗ, ಅವರನ್ನು ನಿಂದಿಸಿದ್ದಾರೆ. ಇದರಿಂದ ವಾಗ್ವಾದ ನಡೆದು ಗಲಾಟೆ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇವಲ ಹಿಂದೂಗಳನ್ನಷ್ಟೇ ಬಂಧಿಸಿದ್ದಾರೆ. ಮುಸ್ಲಿಮರನ್ನು ಓಲೈಕೆ ಮಾಡಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಬಂಧಿತರು ಯಾರೂ ಗಲಾಟೆಯ ವೇಳೆ ಇರಲಿಲ್ಲ. ಹಾಗಾಗಿ, ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಿಡುಗಡೆ ಮಾಡುವವರೆಗೂ ಹೋರಾಟ ಮಾಡುತ್ತೇವೆ” ಎಂದು ಹೇಳಿಕೆ ನೀಡಿದ್ದಾರೆ.
ರಾಜಿ ಸಂಧಾನ: 33 ಮಂದಿಯ ಬಿಡುಗಡೆ?
ಕಡಕೋಳ ಕಲ್ಲು ತೂರಾಟ ಘಟನೆಯ ಬಳಿಕ ಹಿಂದೂ, ಮುಸ್ಲಿಂ ಮುಖಂಡರು ಹಾಗೂ ಗ್ರಾಮಸ್ಥರು ರಾಜಿ ಸಂಧಾನ ನಡೆಸಿರುವ ಬಗ್ಗೆ ವರದಿಯಾಗಿದೆ.
ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಿರುವುದಾಗಿ ತಿಳಿದುಬಂದಿದ್ದು, ಎಲ್ಲ 33 ಆರೋಪಿಗಳನ್ನು ಸಂಜೆಯ ವೇಳೆಗೆ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಈ ನಡೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಸವಣೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ, “ಈ ಬಗ್ಗೆ ಮೇಲಧಿಕಾರಿಗಳಷ್ಟೇ ಮಾಹಿತಿ ನೀಡುತ್ತಾರೆ. ಎಸ್‌ಪಿಯವರನ್ನು ಸಂಪರ್ಕಿಸಿ” ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರನ್ನು ಸಂಪರ್ಕಿಸಿತಾದರೂ, ಕರೆಗೆ ಸ್ಪಂದನೆ ಸಿಕ್ಕಿಲ್ಲ.
ಮಾಧ್ಯಮಗಳು ಎಲ್ಲಿ?
ಕಡಕೋಳ ಗ್ರಾಮದಲ್ಲಿ ಹಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ದಾಂಧಲೆ ನಡೆಸಲಾಗಿದೆ. ಈ ಬಗ್ಗೆ ವರದಿ ಮಾಡಲು ಕನ್ನಡದ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂಬುದೇ ವಿಪರ್ಯಾಸದ ಸಂಗತಿ.
ಸಹಕಾರ : ಕೇಶವ್ ಕಟ್ಟಿಮನಿ












ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.