ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದಲ್ಲಿ ಸುಮಾರು 110 ವಯಸ್ಸಿನ ಲಕ್ಷ್ಮಿಬಾಯಿ ಮಹಾಪುರೆ ಎಂಬ ಅಜ್ಜಿ ಮನೆಗೆ ಕಂದಾಯ ಇಲಾಖೆಯ ಉಪತಹಶೀಲ್ದಾರ್ ಸುನೀಲ್ ಸಿಂಧೆ, ಗ್ರಾಮ ಆಡಳಿತ ಅಧಿಕಾರಿ ಸೋಮಲಿಂಗ ಹಾಗೂ ಮತಗಟ್ಟೆ ಅಧಿಕಾರಿ ಶರಣಪ್ಪ ಅವರು ಭೇಟಿ ನೀಡಿ ಅಜ್ಜಿಯ ದಾಖಲೆಗಳು ಪರಿಶೀಲಿಸಿದರು.
ಈ ಕುರಿತು ʼಈದಿನ.ಕಾಮ್ʼ ನಲ್ಲಿ ನಿನ್ನೆ (ಜ.5) ರಂದು ʼಶತಾಯುಷಿ ಅಜ್ಜಿಗೆ ಶಾಪವಾಯ್ತು ವಯಸ್ಸು?; ವೃದ್ದಾಪ್ಯ ವೇತನಕ್ಕೆ ಅಧಿಕಾರಿಗಳ ಕತ್ತರಿʼ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟವಾಗಿತ್ತು. ಅಲ್ಲದೇ, ವಿಡಿಯೋ ವರದಿ ಕೂಡ ಯೂಟ್ಯೂಬ್‌ನಲ್ಲಿ ಪ್ರಕಟಿಸಿತ್ತು.
ಇದಕ್ಕೆ ಸ್ಪಂದಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಇಂದು ಕಪಲಾಪುರ ಗ್ರಾಮದ ಇಳಿವಯಸ್ಸಿನ ಲಕ್ಷ್ಮೀಬಾಯಿ ಅಜ್ಜಿಯ ಮನೆಗೆ ದೌಡಾಯಿಸಿದರು.
ಇದನ್ನು ಓದಿದ್ದೀರಾ? ಶತಾಯುಷಿ ಅಜ್ಜಿಗೆ ಶಾಪವಾಯ್ತ ವಯಸ್ಸು?; ವೃದ್ದಾಪ್ಯ ವೇತನಕ್ಕೆ ಅಧಿಕಾರಿಗಳ ಕತ್ತರಿ
“ಅಜ್ಜಿಗೆ 110 ವರ್ಷ ವಯಸ್ಸಾದರೂ ಅವರ ಹೆಸರಿಗೆ ಚುನಾವಣೆ ಮತದಾರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಬದುಕಿಗೆ ಯಾವುದೇ ದಾಖಲೆ ಇಲ್ಲ ಎಂಬುದು ಪರಿಶೀಲನೆ ಮೂಲಕ ಖಚಿತಪಡಿಸಿಕೊಂಡಿದ್ದಾರೆ. ಅಜ್ಜಿಯ ಕಿರಿಯ ಮಗ ದಶರಥ ಅವರ ಆಧಾರ್ ಕಾರ್ಡ್ ಮತ್ತು ಚುನಾವಣೆ ಚೀಟಿ ಆಧಾರದ ಮೇಲೆ ನಮೂನೆ-6ರಲ್ಲಿ ಲಕ್ಷ್ಮೀಬಾಯಿ ಅವರ ಹೆಸರು ನೋಂದಾಯಿಸಿಕೊಂಡಿದ್ದಾರೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಲಕ್ಷ್ಮೀಬಾಯಿ ಅಜ್ಜಿಯ ಚುನಾವಣೆ ಚೀಟಿ ಬಂದ ನಂತರ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಜಾರಿ ಮಾಡಿ ಕೊಡುತ್ತೇವೆ” ಎಂದು ಅಧಿಕಾರಿಗಳು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
ಲಕ್ಷ್ಮೀಬಾಯಿ ಅಜ್ಜಿಯ ಮೊಮ್ಮಗ ಅಂಬಾದಾಸ ಈದಿನ.ಕಾಮ್ ಜೊತೆಗೆ ಮಾತನಾಡಿ, “ಬದುಕಿಗೆ ಆಧಾರವಾಗಿ ಯಾವುದೇ ದಾಖಲೆ ಇಲ್ಲದೆ ದಿನಗಳು ದೂಡುತ್ತಿದ್ದ ಅಜ್ಜಿಯ ಬಗ್ಗೆ ʼಈದಿನ.ಕಾಮ್ʼ ವಿಶೇಷ ಕಾಳಜಿವಹಿಸಿ ವರದಿ ಪ್ರಕಟಿಸಿತು. ಅದರ ಫಲವಾಗಿ ಇಂದು ಅಧಿಕಾರಿಗಳು ನಮ್ಮ ಮನೆಗೆ ಭೇಟಿ ನೀಡಿ ಅಜ್ಜಿಯ ದಾಖಲೆ ನೋಂದಣಿ ಮಾಡಿಸಿ, ಶೀಘ್ರದಲ್ಲೇ ಪಿಂಚಣಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ವರದಿ ಪ್ರಕಟಿಸಿದ ಈ ದಿನ.ಕಾಮ್ ಹಾಗೂ ಸ್ಪಂದಿಸಿದ ಕಂದಾಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವೆ” ಎಂದಿದ್ದಾರೆ.