ಹಾಳಕೆರೆ ಗ್ರಾಮದಲ್ಲಿ ಪಡಿತರ ಅಕ್ಕಿ ವಿತರಣೆ ಮಾಡುವ ಸಂಘದವರು ಒಂದೇ ಗೋದಾಮಿನಲ್ಲಿ ಪಡಿತರ ಅಕ್ಕಿ ಹಾಗೂ ಬೀಜ-ಗೊಬ್ಬರಗಳನ್ನು ಸಂಗ್ರಹ ಮಾಡಿ ಇಟ್ಟಿದ್ದಾರೆಂದು ಆರೋಪ ವ್ಯಕ್ತವಾಗಿದೆ. ಆಹಾರ ನಿಯಮ ಪಾಲನೆ ಮಾಡಿಕೊಂಡು ಆರೋಗ್ಯ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಿ ಜನರಿಗೆ ತೊಂದರೆಯಾಗದಂತೆ ಪಡಿತರ ಅಕ್ಕಿ, ಕಾಳುಕಡ್ಡಿ ಸಂಗ್ರಹ ಮಾಡಬೇಕು ಹಾಗೂ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಬೇಕು ಎಂದು ಗಜೇಂದ್ರಗಡ ತಾಲೂಕು ಆಹಾರ ಸರಬರಾಜು ಅಧಿಕಾರಿ ಉಮೇಶ್ ಅರಳಿಗಿಡದ ತಿಳಿಸಿದರು.
ಈ ದಿನ.ಕಾಮ್ ಅಕ್ಟೋಬರ್ 17ರಂದು ಗದಗ | ಒಂದೇ ಗೋದಾಮಿನಲ್ಲಿ ಪಡಿತರ ಅಕ್ಕಿ, ರಸಗೊಬ್ಬರ, ಕ್ರಿಮಿನಾಶಕ, ಸಿಮೆಂಟ್ ದಾಸ್ತಾನು: ಆತಂಕದಲ್ಲಿ ಗ್ರಾಮಸ್ಥರು ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಮಾತನಾಡಿದರು.
“ಘಟನೆ ಕುರಿತು ಈ ದಿನ.ಕಾಮ್ ವರದಿ ಪ್ರಕಟ ಮಾಡಿದೆ. ಸಾರ್ವಜನಿಕರ ಹಿತ ಕಾಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ಉಣ್ಣುವ ಪಡಿತರ ಅಕ್ಕಿಗಳನ್ನು ಕ್ರಿಮಿನಾಶಕ, ಬೀಜ ಗೊಬ್ಬರದ ಜೊತೆಯಲ್ಲಿ ಇಡಬಾರದು. ಕಟ್ಟಡ ನಿರ್ಮಾಣವಾಗುವವರೆಗೂ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಸಂಗ್ರಹ ಮತ್ತು ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುಬೇಕು” ಎಂದು ಆಹಾರ ಸರಬರಾಜು ಅಧಿಕಾರಿ ಪಡಿತರ ವಿತರಣೆ ಮಾಡುವವರಿಗೆ ತಿಳಿಸಿದರು.
ಹಾಲಕೆರೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ ಸಿ ಪಾಟೀಲ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಳೆಯದಾಗಿರುವ ಘಟಕವನ್ನು ನೆಲಸಮಗೊಳಿಸಿ ಅಭಿವೃದ್ಧಿಪಡಿಸುವಂತೆ ರೋಣ ಶಾಸಕ ಜಿ ಎಸ್ ಪಾಟೀಲರು ₹20 ಲಕ್ಷ ಮಂಜೂರು ಮಾಡಿದ್ದಾರೆ. ಈಗಾಗಲೆ ಹೊಸ ಕಟ್ಟಡ ಕಾಮಗಾರಿ ನಡೆದಿದೆ. ಆದಕಾರಣ ಒಂದೇ ಘಟಕದಲ್ಲಿ ಅಕ್ಕಿ ಮತ್ತು ಗೊಬ್ಬರ ಸಂಗ್ರಹವಾಗಿರುತ್ತದೆ. ಆಹಾರ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡದೆ ಜನರಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಿ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪಡಿತರ ಅಕ್ಕಿ ಹಾಗೂ ಬೀಜಗೊಬ್ಬರದ ಸಂಗ್ರಹಣೆ, ವಿತರಣೆ ಪ್ರತ್ಯೇಕಿಸಲಾಗುತ್ತದೆ” ಎಂದರು.
ಘಟನೆ ಹಿನ್ನೆಲೆ
ಗದಗ ಜಿಲ್ಲೆಯ ರೋಣ ತಾಲೂಕಿನ ಹಾಳಕೇರಿ ಗ್ರಾಮದಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಆಹಾರ ಕೊಡುವ ಉದ್ದೇಶದಿಂದ ಸರ್ಕಾರ ಪಡಿತರ ಕಾರ್ಡ್ ವ್ಯವಸ್ಥೆ ಮಾಡಿ, ನ್ಯಾಯ ಬೆಲೆ ಅಂಗಡಿ ಮೂಲಕ ಬಡವರಿಗೆ ಉಚಿತ ಪಡಿತರ ನೀಎಉತ್ತದೆ. ಆದರೆ ಇಲ್ಲೊಂದು ನ್ಯಾಯಬೆಲೆಯ ಅಂಗಡಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ ಗೊಬ್ಬರ, ಕ್ರಿಮಿನಾಶಕದಂತಹ ಎಣ್ಣೆ ಔಷಧಿ, ರಸಗೊಬ್ಬರ ಶೇಖರಣೆ ಮಾಡಿ, ಜನರಿಗೆ ಪಡಿತರ ಹಂಚುತ್ತಾರೆ. ಜನರ ಜೀವದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಡುಗು-ಸಿಡಿಲು ಸಹಿತ ಮಳೆ : ತುಮಕೂರು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ : ಜಿಲ್ಲಾಧಿಕಾರಿ
ಸರ್ಕಾರದ ನಿಯಮದ ಪ್ರಕಾರ ಸೊಸೈಟಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಜಮೀನುದಾರರಿಗೆ, ಸಂಬಂಧಿಸಿದ ದಾಖಲೆಗಳು ಇದ್ದರೆ ಅವರಿಗೆ ಬೀಜ ಗೊಬ್ಬರ ಕೊಡಬೇಕು. ಆದರೆ ಇವರಿಗೆ ಸಿಗುವುದಿಲ್ಲ. ಈ ನಿಯಮ ಕಡೆಗಣಿಸಿ ಯಾರು ದುಡ್ಡು ಕೊಡುತ್ತಾರೋ, ಅವರಿಗೆ ಬೀಜ ಗೊಬ್ಬರ ಕೊಡುತ್ತಾರೆ. ಇಲ್ಲಿರುವ ಡಿ ದರ್ಜೆ ಕೆಲಸಗಾರ ಕೂಡ ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಾನೆಂದು ಅಲ್ಲಿಯ ಜನರು ಹೇಳುತ್ತಾರೆ ಎಂದು ಈ ದಿನ.ಕಾಮ್ ಸ್ಥಳೀಯ ಸಮಸ್ಯೆ ಕುರಿತು ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.