ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಕಳೆದ 40 ವರ್ಷಗಳಿಂದಲೂ ಅಲೆಮಾರಿಗಳಾದ ಹಂದಿಜೋಗಿ ಸಮುದಾಯದ ಮಂದಿ ತೀವ್ರ ನಿಕೃಷ್ಟ ಬದುಕು ನಡೆಸುತ್ತಿದ್ದರು. ಮಳೆಗಾಲ ಬಂದರೆ ತಗ್ಗು ಪ್ರದೇಶದ ಗುಡಿಸಲಿಗೆ ನೀರು ತುಂಬುತ್ತಿತ್ತು. ಈ ಬಗ್ಗೆ ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆ ಹಾಗೂ ತುಮಕೂರು ಕಾಳಜಿ ಫೌಂಡೇಶನ್ ನೀಡಿದ್ದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಈ ದಿನ.ಕಾಮ್ ತಂಡ, ವಿಸ್ತಾರವಾದ ವಾಸ್ತವ ಚಿತ್ರಣದ ಬಗ್ಗೆ ಅಕ್ಟೋಬರ್ 16ರಂದು ವರದಿ ಬಿತ್ತರಿಸಿತ್ತು.
ಸುದ್ದಿ ಪ್ರಸಾರವಾದ ನಂತರ ಎಚ್ಚೆತ್ತ ತುಮಕೂರಿನ ಅಧಿಕಾರಿಗಳು, ಸಾತೇನಹಳ್ಳಿ ಬಳಿಯಲ್ಲಿ ಅಲೆಮಾರಿಗಳಿಗೆ ಮೀಸಲಿಟ್ಟ ನಿವೇಶನದಲ್ಲಿ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಲು ಗುರುವಾರ ಬೆಳಗ್ಗೆ ತಾಪಂ ಇಓ ಶಿವಪ್ರಕಾಶ್ ನೇತೃತ್ವದ ತಂಡ ಭೇಟಿ ನೀಡಿದೆ.
ಕಳೆದ ಹಲವು ವರ್ಷದಿಂದ ಕಾದಿರಿಸಿದ್ದ ನಿವೇಶನದಲ್ಲಿ ವಸತಿ ನಿರ್ಮಾಣ ಮಾಡುವ ಭರವಸೆ ಇನ್ನೂ ಈಡೇರಿಲ್ಲ. ಸದ್ಯಕ್ಕೆ ಮಾರನಕಟ್ಟೆ ಕೆರೆಯ ಒಂದು ಬದಿಯಲ್ಲಿ ಗುಬ್ಬಿ ಪೊಲೀಸ್ ಠಾಣೆ ಹಿಂಬದಿ ನಲವತ್ತು ಕುಟುಂಬ ತೀರಾ ಅಮಾನವೀಯ ಜೀವನ ನಡೆಸಿದ್ದಾರೆ. ಈ ಬಗ್ಗೆ ಸುದ್ದಿ ಬಂದ ನಂತರ ಅಲ್ಲಿನ ಕುಟುಂಬಗಳನ್ನು ಕಾದಿರಿಸಿದ್ದ ನಿವೇಶನದಲ್ಲಿ ತಾತ್ಕಾಲಿಕ ಶೆಡ್ ಮಾಡಿಕೊಂಡು ಸದ್ಯದ ಬದುಕು ನಡೆಸಲು ಅನುವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ನಿವೇಶನದಲ್ಲಿ ಶೆಡ್ ಅರ್ಹ ಫಲಾನುಭವಿಗಳೇ ನಿರ್ಮಿಸಿಕೊಳ್ಳುತ್ತಾರೆ. ಅಗತ್ಯ ಮೂಲ ಸವಲತ್ತು ನೀರು ಮತ್ತು ಕರೆಂಟ್ ವ್ಯವಸ್ಥೆಗೆ ಸ್ಥಳೀಯ ನಲ್ಲೂರು ಗ್ರಾಮ ಪಂಚಾಯಿತಿ ಸಿದ್ಧವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ.ವೆಂಕಟೇಶ್, “ಯಾವುದೇ ಪ್ರಾಣಿಗಳು ವಾಸಿಸಲು ಯೋಗ್ಯವಲ್ಲದ ಜಾಗದಲ್ಲಿ ಸುಮಾರು 40 ವರ್ಷಗಳಿಂದಲೂ ತುಮಕೂರು ಜಿಲ್ಲಾಡಳಿತ ನಿರ್ಲಕ್ಷಿಸಿದ ಪರಿಣಾಮ ನೈಜ ಹೋರಾಟಗಾರರ ವೇದಿಕೆ ಮತ್ತು ತುಮಕೂರು ಕಾಳಜಿ ಫೌಂಡೇಶನ್‌ನ ಸಾಮಾಜಿಕ ಹೋರಾಟಗಾರರು ಅಲ್ಲಿ ವಾಸಿಸುವ ಜನರ ನರಕ ಯಾತನೆಯನ್ನು ನೋಡಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತದ ಗಮನಕ್ಕೆ ಮನವಿ ಸಲ್ಲಿಸಿ, ತಕ್ಷಣ ಒಂದು ವಾರದ ಒಳಗೆ ಇಲ್ಲಿ ವಾಸಿಸುವ ಮನುಷ್ಯರನ್ನು ಮನುಷ್ಯರಾಗಿ ನೋಡಿ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದ್ದೆವು. ನಮ್ಮ ಹೋರಾಟದ ಪ್ರಾರ್ಥಮಿಕ ಹಂತದಲ್ಲಿಯೇ ಗುಬ್ಬಿ ತಹಶೀಲ್ದಾರ್ ಮತ್ತು ಪಟ್ಟಣ ಪಂಚಾಯಿತಿಯ ಚೀಫ್ ಆಫೀಸರ್ ಹಾಗೂ ಗುಬ್ಬಿ ಶಾಸಕರು ಅಲ್ಲಿನ ನಿವಾಸಿಗಳನ್ನು ಕರೆಸಿ ಸಾತೇನಹಳ್ಳಿಯಲ್ಲಿ ಮಂಜೂರಾದ ಜಮೀನಿಗೆ ತಕ್ಷಣ ಮೂಲಭೂತ ಸೌಕರ್ಯಗಳನ್ನು ಕೊಡಲು ಮುಂದಾಗಿರುವುದು ಅತ್ಯಂತ ಸಂತೋಷದಾಯಕ ಮತ್ತು ಶ್ಲಾಘನೀಯವಾಗಿದೆ” ಎಂದು ತಿಳಿಸಿದ್ದಾರೆ.
ಕೊನೆಗೂ ಪ್ರಾಣಿಗಳು ವಾಸಿಸಲು ಯೋಗ್ಯವಲ್ಲದ ಜಾಗದಲ್ಲಿ ಮನುಷ್ಯರು ವಾಸಿಸುತ್ತಿರುವುದನ್ನು ಗುರುತಿಸಿದ ಅಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇವೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆ ಬುಡಕಟ್ಟು ಜನಾಂಗದವರಿಗೆ ಸೇರಬೇಕಾಗಿದ್ದ ಮೂಲಭೂತ ಸೌಕರ್ಯದ ಭಾಗವಾಗಿ ಟಾರ್ಪಲ್ ಗಳು ಇನ್ನಿತರ ಸೇವಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಕ್ಷಣ ತಲುಪಿಸುವ ಕಾರ್ಯವನ್ನು ಮಾಡಬೇಕು. ಮೂಲಭೂತ ಸೌಕರ್ಯಕ್ಕೆ ಕೊಡಲು ಮುಂದಾದ ತಾಲೂಕು ಆಡಳಿತವು ಅದನ್ನು ಸಮರ್ಪಕವಾಗಿ ಅವರಿಗೆ ತಲುಪಿಸಬೇಕು. ಅಲ್ಲಿನ ನಿರಾಶ್ರಿತರಿಗೆ ಆಶ್ರಯವಾಗಿ ಸರ್ಕಾರದ ಎಲ್ಲಾ ಸೇವಾ ಸೌಲಭ್ಯಗಳನ್ನು ತಲುಪಿಸಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಭೇಟಿ ನೀಡಿದ್ದ ತಂಡದಲ್ಲಿ ಗುಬ್ಬಿ ತಾಪಂ ಇಓ ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಕುಮಾರ್, ರೇಣುಕಾ ಪ್ರಸಾದ್, ನಲ್ಲೂರು ಪಿಡಿಓ ಯುವರಾಜ್ ಇತರರು ಇದ್ದರು.
ಹೋರಾಟ ಎಚ್ಚರಿಕೆ ನೀಡಿದ್ದ ಸಂಘ-ಸಂಸ್ಥೆಗಳು
ತುಮಕೂರು ಜಿಲ್ಲೆ ಗುಬ್ಬಿ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಹಂದಿಜೋಗಿ ಮತ್ತು ಬುಡುಗ ಜನಾಂಗದ 42 ಕುಟುಂಬಗಳು ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ನಾಗರಿಕ ಸಮಾಜ ಬದುಕಲು ಸಾಧ್ಯವಾಗದಿರುವಂತಹ ವಾತಾವರಣದಲ್ಲಿ ಬದುಕುತ್ತಿರುವುದನ್ನು ಕಣ್ಣಾರೆ ಕಂಡ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು ಮತ್ತು ತುಮಕೂರು ಕಾಳಜಿ ಫೌಂಡೇಶನ್ ಪದಾಧಿಕಾರಿಗಳು ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಮನವಿ ಪತ್ರ ಸಲ್ಲಿಸಿತ್ತು.
ಈ ಕುಟುಂಬಗಳಿಗೆ ನಾಗರಿಕ ಸೇವಾ ಸೌಲಭ್ಯಗಳನ್ನು ತಲುಪಿಸಬೇಕು. ಇಲ್ಲದೇ ಇದ್ದಲ್ಲಿ ತಹಶೀಲ್ದಾರ್ ಅವರ ಕಚೇರಿಯ ಮುಂದೆ ಚಳುವಳಿಯನ್ನು ನಡೆಸುವ ಎಚ್ಚರಿಕೆಯನ್ನು ನೀಡಿದ್ದರು.
ಈ ಮನವಿ ಸಲ್ಲಿಸುವ ವೇಳೆ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ.ವೆಂಕಟೇಶ್, ಮಲ್ಲಿಕಾರ್ಜುನ್ ಎಲ್. ಎಸ್ ತಿಪ್ಪೇಸ್ವಾಮಿ ಸಿ.ಪಿ, ಮುದ್ದು ರಂಗಪ್ಪ ನರಸಿಂಹಮೂರ್ತಿ ಜಿ.ಏನ್ ಮತ್ತು ಹನುಮಂತ ರಾಯಪ್ಪ ಹಾಗೂ ಕಾಳಜಿ ಫೌಂಡೇಶನ್‌ನ ರಫೀಕ್, ಶಿವಕುಮಾರ್, ನಟರಾಜ್, ಪದ್ಮನಾಭ, ಗಣೇಶ್ ಮತ್ತು ಸತೀಶ್ ಹಾಜರಿದ್ದರು.






