ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲ ಹಾಗೂ ಪ್ರೌಢ ಶಾಲೆಯ ವಿಧ್ಯಾರ್ಥಿನಿಯರ ಶೌಚಾಲಯಕ್ಕೆ ಬಾಗಿಲುಗಳು ಇಲ್ಲದಿರುವ ಕುರಿತು ಸೆ.28ರಂದು ಈ ದಿನ.ಕಾಮ್ ವರದಿ ಮಾಡಿತ್ತು. ಈ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದು, ತಾತ್ಕಾಲಿಕವಾಗಿ ಎರಡು ಶೌಚಾಲಯ ನಿರ್ಮಾಣ ಮಾಡಿಸಿದ್ದಾರೆ.
ಸಾಲಾಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 207 ವಿದ್ಯಾರ್ಥಿನಿಯರು ಹಾಗೂ 156 ವಿದ್ಯಾರ್ಥಿಗಳು ಹಾಗೂ ಪಕ್ಕದ ಪ್ರೌಢ ಶಾಲೆಯಲ್ಲಿ 99 ವಿದ್ಯಾರ್ಥಿನಿಯರು ಹಾಗೂ 126 ವಿದ್ಯಾರ್ಥಿಗಳು ಇದ್ದು, ಶೌಚಾಲಯ ಇಲ್ಲದ್ದರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಷ್ಟಪಡುತ್ತಿದ್ದರು. ಈ ಬಗ್ಗೆ ವಿದ್ಯಾರ್ಥಿನಿಯರು ಈ ದಿನ.ಕಾಮ್ ಜೊತೆ ಶಾಲಾ ಶೌಚಾಲಯ ಸಮಸ್ಯೆ ಕುರಿತು ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದರು.

ಈ ದಿನ.ಕಾಮ್ ಈ ಸಮಸ್ಯೆ ಕುರಿತು ತಾಲುಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಮದುರ್ಗ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದು, ಸಾಲಾಪೂರ ಗ್ರಾಮದ ಶೌಚಾಲಯ ಸಮಸ್ಯೆಗೆ ಪರಿಹಾರ ನೀಡುವಂತೆ ತಿಳಿಸಿತ್ತು. ಈ ದಿನ.ಕಾಮ್ ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಶಾಲೆಯಲ್ಲಿ ಎರಡು ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಿಸಿದ್ದಾರೆ.
ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ದಿನ.ಕಾಮ್ ಜೊತೆ ಮಾತನಾಡಿ, ಸಾಲಾಪೂರ ಗ್ರಾಮದ ಶಾಲೆಗೆ ಈ ವಾರದಲ್ಲಿ ಭೇಟಿ ನೀಡಿ, ಸದ್ಯ ನಿರ್ಮಾಣವಾಗಿರುವ ತಾತ್ಕಾಲಿಕ ಶೌಚಾಲಯ ಪರಿಶೀಲನೆ ಮಾಡುತ್ತೇವೆ. ಆ ಬಳಿಕ ಉತ್ತಮ ಸೌಲಭ್ಯಗಳುಳ್ಳ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜೊತೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ಲಕ್ಷೀ ಬರಿಗಾಲ, ಸ್ನೇಹಾ ಬರಿಗಾಲ, ಸೌಜನ್ಯ ಬೆಳವಲದ ಮಾತನಾಡಿ, ಈ ದಿನ.ಕಾಮ್ ವರದಿ ಮಾಡಿದ ಮೇಲೆ ನಮ್ಮ ಶಾಲೆಯಲ್ಲಿ ತಾತ್ಕಾಲಿಕವಾಗಿ ಶೌಚಾಲಯ ನಿರ್ಮಾಣ ಮಾಡಿದ್ದು ಸಂತೋಷವಾಗಿದೆ. ವರದಿ ಮಾಡಿದ್ದಕ್ಕೆ ಈ ದಿನ.ಕಾಮ್‌ಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು