ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದ ಮದನೂರ ರಸ್ತೆಯಲ್ಲಿರುವ ಬಸ್ ನಿಲ್ದಾಣದ ದುರಸ್ತಿ ಕಾರ್ಯ ಭರದಿಂದ ಸಾಗಿದೆ.
ಈ ಬಗ್ಗೆ ಈದಿನ.ಕಾಮ್ ನಲ್ಲಿ ಕಳೆದ ಅಕ್ಟೋಬರ್ 5ರಂದು ʼಬಳಕೆಯಾಗದೇ ಪಾಳುಬಿದ್ದಿದೆ ಕಮಲನಗರ ಬಸ್ ನಿಲ್ದಾಣʼ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಅಧಿಕಾರಿಗಳು ಪಾಳು ಬಿದ್ದ ಬಸ್ ನಿಲ್ದಾಣ ಕಟ್ಟಡದ ರಿಪೇರಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಸುಮಾರು 15 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬಸ್ ನಿಲ್ದಾಣ ಬಳಕೆಯಾಗದೇ ಹಾಳು ಕೊಂಪೆಯಾಗಿತ್ತು. ತಾಲ್ಲೂಕು ಕೇಂದ್ರ ಘೋಷಣೆಯಾಗಿ ಐದು ವರ್ಷಗಳೇ ಕಳೆದಿವೆ, ಆದರೂ ಸಾರ್ವಜನಿಕರಿಗೆ ಸುಸಜ್ಜಿತ ಬಸ್ ನಿಲ್ದಾಣವಿಲ್ಲ. ಇದ್ದ ಬಸ್ ನಿಲ್ದಾಣ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದಿವೆ, ಕಟ್ಟಡದ ಕಿಡಿಕಿ, ಬಾಗಿಲು ಪುಡಿಯಾಗಿ ಇದ್ದೂ ಇಲ್ಲದಂತಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

“ಬಸ್ ನಿಲ್ದಾಣ ಆವರಣದಲ್ಲಿ ಬೆಳೆದಿದ್ದ ಗಿಡ-ಗಂಟಿಗಳು ತೆಗೆದು ಸ್ವಚ್ಛಗೊಳಿಸಲಾಗಿದೆ. ಕಾಂಪೌಂಡ್ ಸೇರಿದಂತೆ ನಿಲ್ದಾಣದಲ್ಲಿನ ಕೋಣೆಗಳಿಗೆ ಬಣ್ಣ ಬಳಿಯುವ ಕಾರ್ಯ ಮುಗಿದಿದ್ದು. ಓರ್ವ ಕಂಟ್ರೊಲರಿಗೆ ನೇಮಕ ಮಾಡಲಾಗಿದೆ. ಕಿಟಿಕಿಗಳಿಗೆ ಹೊಸ ಗ್ಲಾಸ್ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರ ಕೆಲಸಗಳು ಬಾಕಿ ಉಳಿದಿವೆ, ಇನ್ನೊಂದು ವಾರದಲ್ಲಿ ದುರಸ್ತಿ ಕಾರ್ಯ ಸಂಪೂರ್ಣ ಮುಗಿಯುತ್ತದೆ. ಕಳೆದ ಎರಡು ವಾರದಿಂದ ಔರಾದ ಬಸ್ ಘಟಕದ ಎಲ್ಲಾ ಬಸ್ ಕಮಲನಗರ ಬಸ್ ನಿಲ್ದಾಣಕ್ಕೆ ತೆರಳುತ್ತಿವೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯ ಎಲ್ಲಾ ಬಸ್ ಕಮಲನಗರ ನಿಲ್ದಾಣಕ್ಕೆ ಬರುವಂತೆ ಸೂಚಿಸಲಾಗುವುದು ಎಂದು ಔರಾದ ತಾಲೂಕು ಘಟಕ ವ್ಯವಸ್ಥಾಪಕ ಎಸ್. ಟಿ.ರಾಠೋಡ್, ಈದಿನ.ಕಾಮ್ ದೊಂದಿಗೆ ಮಾತನಾಡಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಗವಿಕಲರ ನಿಧಿ ಸಮಪರ್ಕವಾಗಿ ಬಳಕೆಗೆ ಆಗ್ರಹ
ಸುಮಾರು ವರ್ಷಗಳಿಂದ ಪಾಳು ಬಿದ್ದಿದ್ದ ಕಮಲನಗರ ಬಸ್ ನಿಲ್ದಾಣ ಕುರಿತು ಈದಿನ.ಕಾಮ್ ಪ್ರಕಟಿಸಿದ ವಿಶೇಷ ವರದಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡುವ ಮೂಲಕ ಬಸ್ ನಿಲ್ದಾಣಕ್ಕೆ ಕಳೆ ತಂದಂತಾಗಿದೆ. ಜನಸಂಖ್ಯೆ ಹೆಚ್ಚಾದ ಪರಿಣಾಮ ವಾಹನ ಸಂಚಾರವೂ ದಟ್ಟಣೆಯಾಗಿದೆ. ಎಲ್ಲಾ ಮಾರ್ಗದ ಬಸ್ ಗಳು ಬಸ್ ನಿಲ್ದಾಣಕ್ಕೆ ಬರುವಂತಾದರೆ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.