ಭಾರತ ದೇಶ ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದರೂ, ಸಾರ್ವತ್ರಿಕ ಚುನಾವಣೆಯಲ್ಲಿ ಮತಯಂತ್ರಗಳ ದುರ್ಬಳಕೆಯಿಂದ ಪ್ರಜಾಪ್ರಭುತ್ವದ ಘನತೆ ಮತ್ತು ಮೌಲ್ಯ ಕುಸಿತಕ್ಕೊಳಗಾಗಿತ್ತಿದೆ. ಆದ್ದರಿಂದ, ಮತದಾರರ ಮತದಾನದ ಹಕ್ಕಿನ ರಕ್ಷಣೆಗಾಗಿ ಮತಪತ್ರಗಳನ್ನೇ ಬಳಸಬೇಕೆಂದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಹಿಂದ ಜನಚಳುವಳಿ ನಡೆಸುತ್ತಿರುವ ಹಕ್ಕೊತ್ತಾಯ ಧರಣಿಯಲ್ಲಿ ಮಮತಾ ಗಟ್ಟಿ ಭಾಗವಹಿಸಿದ್ದರು.
ಧರಣಿಯಲ್ಲಿ ಮಾತನಾಡಿದ ಅಹಿಂದ ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾನ, “ಅಂಬೇಡ್ಕರ್ ಅವರು ನೀಡಿದ ದೇಶದ ಸಂವಿಧಾನ ರಕ್ಷಣೆಗಾಗಿ ನಾಗರಿಕರ ಮತದಾನದ ಹಕ್ಕನ್ನು ಸಂರಕ್ಷಿಸುವುದು ಅತ್ಯಗತ್ಯ. ಆ ದಿಸೆಯಲ್ಲಿ ಅಹಿಂದ ಜನಚಳುವಳಿ ಈ ಜನಜಾಗೃತಿ ಧರಣಿ ನಡೆಸುತ್ತಿದೆ” ಎಂದರು.
ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ ಮುಹಮ್ಮದ್ ಹನೀಫ್ ಮಾತನಾಡಿ, “ಮತದಾನ ಮಾಡಿದಾಗ ಮತದಾರನ ಓಟು ಯಾರಿಗೆ ಸಂದಾಯವಾಗಿದೆ ಎಂದು ಮತದಾರನಿಗೇ ತಿಳಿದುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಇವಿಎಂನಿಂದ ಸೃಷ್ಟಿಯಾಗಿದೆ. ಚುನಾವಣೆಯು ಸಮುದ್ರಕ್ಕೆ ಕಲ್ಲುಹಾಕಿದಂತೆ ಭಾಸವಾಗುತ್ತದೆ. ಶಿಕ್ಷಿತರು ಕಡಿಮೆ ಪ್ರಮಾಣದಲ್ಲಿರುವ ಭಾರತ ದೇಶದಲ್ಲಿ, ವಿವಿಪ್ಯಾಟ್ ಮೂಲಕ ಕೂಡಾ ಮತದಾನ ಯಾರಿಗೆ ಮಾಡಲಾಗಿದೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಿಲ್ಲದಾಗಿದೆ” ಎಂದರು.
“ಅಧಿಕಾರಿಗಳ ಒತ್ತಾಸೆಯಿಂದಾಗಿ ಚಲಾವಣೆಯಾದ ಮತಗಳಲ್ಲಿ ಕೇವಲ ಮೂರನೇ ಒಂದರಷ್ಟು ಓಟುಗಳನ್ನಾದರೂ ಮತಯಂತ್ರದ ಮೂಲಕ ದುರುಪಯೋಗ ಪಡಿಸಿಕೊಂಡರೆ ಅಥವಾ ಕೆಲವು ಮತಯಂತ್ರಗಳನ್ನೇ ಲಪಟಾಯಿಸಿ ಬೇರೆ ಮತಯಂತ್ರಗಳ ವ್ಯವಸ್ಥೆ ಮಾಡಿದರೆ ಅಥವಾ ಚಲಾವಣೆಯಾದ ಮತಗಳನ್ನು ತಿರುಚಿದರೆ ಮತಯಂತ್ರಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಮತ ಪತ್ರಗಳ ಮೂಲಕವೇ ಚುನಾವಣೆ ನಡೆಸಬೇಕೆಂದು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿರುವುದು ಪ್ರಶಂಸನೀಯ” ಎಂದರು.
ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ತಬೈಲ್ ಮಾತನಾಡಿ, “ಮತದಾರ ಬಂಧುಗಳು ಈ ದೇಶದ ಪ್ರಭುಗಳೇ ಹೊರತು ಜನಪ್ರತಿನಿಧಿಗಳು ಪ್ರಭುಗಳು ಅಲ್ಲ. ಅವರು ನಮ್ಮ ಸೇವಕರು. ಆದ್ದರಿಂದ ಚುನಾವಣಾ ವ್ಯವಸ್ಥೆಯ ರಕ್ಷಣೆಗಾಗಿ ಮತಪತ್ರಗಳು ಮರಳಿ ಬಳಕೆಯಾಗಬೇಕು” ಎಂದು ಆಗ್ರಹಿಸಿದರು.
ದಲಿತ ಚಳವಳಿ ಮುಖಂಡ ಅಚ್ಚುತ ಮೂಡಬಿದ್ರೆ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಖಾಲಿದ್ ಉಜಿರೆ, ಸಾಮಾಜಿಕ ದುರೀಣರಾದ ಪ್ರಕಾಶ್ ಬಿ. ಸಾಲ್ಯಾನ್, ಪರಮೇಶ್ವರ್, ರಾಖೇಶ್ ಕುಂದರ್, ಬಿ.ಎ. ಅಬೂಬಕ್ಕರ್, ಹಮೀದ್ ಕಿನ್ಯಾ, ಸಾಮುವೆಲ್ ಸದಾನಂದ ಅಮ್ಮಣ್ಣ, ಅಬ್ದುಲ್ ಖಾದರ್ ಇಡ್ಮಾ ಮತ್ತಿತರರು ಮಾತನಾಡಿದರು.
ಅಹಿಂದ ಪ್ರಧಾನ ಕಾರ‍್ಯದರ್ಶಿ ಯೂಸುಫ್ ವಕ್ತಾರ್ ಸ್ವಾಗತಿಸಿದರು ಮತ್ತು ಅಹಿಂದ ಉಪಾಧ್ಯಕ್ಷ ಇಬ್ರಾಹಿಮ್ ನಡುಪದವು ವಂದಿಸಿದರು.