ಚಿಕ್ಕಮಗಳೂರು ತಾಲೂಕಿನ ಆಲ್ಲೂರಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಟಮ್ಮ ಗುಂಪಿನ ಆನೆಗಳು ಕಾಣಿಸಿಕೊಂಡಿವೆ. ತುಡುಕೂರು ಗ್ರಾಮದ ಉದಯಗೌಡ ಮತ್ತು ಮಹೇಶಗೌಡ ಎಂಬುದವರ ತೋಟದಲ್ಲಿ ಗೇಟ್ ಮುರಿದು ಸುಮಾರು 20 ಆನೆಗಳು ತೋಟಕ್ಕೆ ನುಗ್ಗಿದ್ದರಿಂದ ಕಾಫಿಹಣ್ಣನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಕಾರ್ಮಿಕರು ಜೀವ ಭಯದಿಂದ ಓಡಿ ಹೋದ ಘಟನೆ ನಡೆದಿದೆ.
ಆನೆ ದಾಳಿಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಆನೆಗಳ ಹಿಂಡಿನ ವಿವರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಕೆಲವು ತಿಂಗಳ ಹಿಂದೆ ಇದೇ ಆನೆಯ ಹಿಂಡು ಸಕಲೇಶಪುರದಿಂದ ಬೇಲೂರು, ಕೆ.ಆರ್.ಪೇಟೆಯ ಮೂಲಕ ಚಿಕ್ಕಮಗಳೂರು ತಾಲೂಕನ್ನು ಪ್ರವೇಶಿಸಿದ್ದವು. ವಸ್ತಾರೆ, ಆಣೂರು ಜೋಳದಾಳ್ ಮೂಲಕ ತಳಿಹಳ್ಳ, ಜಗ್ಗನಹಳ್ಳಿಯ ತೋಟಗಳಲ್ಲಿ ಬೀಡುಬಿಟ್ಟಿದ್ದವು. ಇನ್ನೇನು ಭದ್ರ ಅಭಯಾರಣ್ಯಕ್ಕೆ ಮುಖ ಮಾಡುತ್ತವೆ ಎನ್ನುವಷ್ಟರಲ್ಲಿ ಯೂಟರ್ನ್ ಹೊಡೆದು ನಲ್ಲೂರು ಗುಡ್ಡಕ್ಕೆ ಆನೆಗಳು ಬಂದಿದ್ದವು.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆನೆಕಾವಲು ಪಡೆ, ಪೊಲೀಸರು ಗೃಹರಕ್ಷಕ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಗಳು ಬಂದ ದಾರಿಯಲ್ಲೇ ಹಿಂದಿರುಗುವಂತೆ ಪ್ರಯತ್ನಿಸಲಾಗಿತ್ತು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಲ್ಲೂರು ಸಮೀಪದ ತುಡಕೂರು, ಮಡೆನೆರಲು, ನೊಜ್ಜೆಪೆಟೆ, ಹಳೆ ಆಲ್ಲೂರು, ಆಲ್ಲೂರು ಹೊಸಳ್ಳಿ, ಎಲಗುಡಿಗೆ ಈ ಗ್ರಾಮದ ಸುತ್ತ ಮುತ್ತ ಇರುವ ಗ್ರಾಮಸ್ಥರು ಹಾಗೂ ತೋಟದಲ್ಲಿ ಕೆಲಸ ಕುವ ಕಾರ್ಮಿಕರು ಮತ್ತು ವಾಹನ ನಿವಾರರೂ ಎಚ್ಚರಿಕೆಯಿಂದ ಇರಬೇಕಾಗಿದೆ. ಸಕಲೇಶಪುರ ಆಲೂರು ಭಾಗದಲ್ಲಿದ್ದ ಬೀಟಮ್ಮ ಮತ್ತು ಭುವನೇಶ್ವರಿ ಗುಂಪಿನ ಆನೆಗಳಲ್ಲಿ ಒಟ್ಟು 20 ಆನೆಗಳು ಈಗ ಚಿಕ್ಕಮಗಳೂರು ಜಿಲ್ಲೆಗೆ ಬಂದಿವೆ. ಚೀಕನಹಳ್ಳಿ, ಚಟ್ನಳ್ಳಿ, ನಂದೀಪು ಮಾರ್ಗವಾಗಿ ಈಗ ಆಲ್ಲೂರು ಭಾಗದಲ್ಲಿ ಸಂಚರಿಸುತ್ತಿವೆ. ಈ ಗುಂಪಿನಲ್ಲಿ ಒಂದು ಮರಿಯಿದ್ದು, ಮತ್ತೊಂದು ಆನೆ ಮದಬಂದಿತ್ತು ಎಂದು ಅಲ್ಲೂರು ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಗುತ್ತಿಗೆ ಆಧಾರದ ಮೇಲೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ; ನ.15ರಂದು ಕೊನೆಯ ದಿನ
ಈ ಗುಂಪನ್ನು ಸೂಕ್ಷ್ಮವಾಗಿ ನಿರ್ವಹಿಸುವ ದೊಡ್ಡ ಸವಾಲಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಇವುಗಳ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಸ್ಥಳೀಯ ಜನರಿಗೆ ಆನೆಗಳ ಚಲನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ಆನೆಗಳ ಗುಂಪಿನಲ್ಲಿ ಯಾವುದೇ ಆನೆಗೆ ಕಾಲರ್ ಐಡಿ ಇಲ್ಲದೇ ಇರುವುದು ಸಹ ಅವುಗಳ ಚಲನ ವಲನಗಳ ಬಗ್ಗೆ ನಿಖರ ಮಾಹಿತಿ ಅರಿಯಲು ಅಡ್ಡಿಯಾಗಿದೆ. ಈ ಗುಂಪನ್ನು ಬಂದ ದಾರಿಯಲ್ಲೇ ಮತ್ತೆ ಹಿಂದಿರುಗುವಂತೆ ಮಾಡಲು ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಜನರು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಅರಣ್ಯ ಡಿಎಫ್ಓ ರಮೇಶ್ ಬಾಬು ಮಾಹಿತಿ ತಿಳಿಸಿದ್ದಾರೆ.
