ಗ್ರಾಮಸ್ಥರ ಮೇಲೆ ಎಂಜಿನಿಯರ್ ಒಬ್ಬನ ದ್ವೇಷ ಮತ್ತು ಬೆಂಗಳೂರು ಪೊಲೀಸರ ಯಡವಟ್ಟಿನಿಂದಾಗಿ ಗ್ರಾಮವೊಂದರ ಸುಮಾರು 60 ಮಂದಿಗೆ ಸಂಚಾರ ಪೊಲೀಸರು ಸುಮಾರು 5 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ದಂಡದ ಮೊತ್ತ ನೋಡಿ ಬೆರಗಾಗಿರುವ ಗ್ರಾಮದ ಜನರು ನ್ಯಾಯಕ್ಕಾಗಿ ಪೊಲೀಸ್ ಕಚೇರಿಯ ಮೆಟ್ಟಿಲೇರಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆರಳಾಳುಸಂದ್ರ ಗ್ರಾಮದ 60 ಮಂದಿಗೆ ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ದಂಡ ವಿಧಿಸಲಾಗಿದೆ. ದಂಡದ ಮಾಹಿತಿ ನೀಡಿ ಬೆರಗಾದ ಗ್ರಾಮಸ್ಥರು ಆ ಕುರಿತು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನಗರ ಪೊಲೀಸರು ತಮಗೆ ದಂಡ ವಿಧಿಸಿರುವುದನ್ನು ಕಂಡು, ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೆಲ್ಲಕ್ಕೆ ಕಾರಣ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ತಮ್ಮದೇ ಗ್ರಾಮದ ಲೋಕೇಶ್ ಎಂದು ಆರೋಪಿಸಿದ್ದಾರೆ.
ಎಂಜಿನಿಯರ್ ಲೋಕೇಶ್ ತನ್ನ ಗ್ರಾಮದ ಹಲವಾರು ಮಂದಿಯ ಮೇಲೆ ದ್ವೇಷ, ಅಸೂಯೆ ಹೊಂದಿದ್ದ. ಗ್ರಾಮದಲ್ಲಿದ್ದ ತನ್ನ ಮನೆಯ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಿಕೊಂಡಿದ್ದ. ತನ್ನ ಮನೆಯ ಮುಂದೆ ವಾಹನಗಳಲ್ಲಿ ಓಡಾಡುವವರ ಚಿತ್ರಗಳನ್ನು ಸೆರೆಹಿಡಿದು, ಸಂಚಾರ ನಿಮಯ ಉಲ್ಲಂಘಿಸಿದ್ದಾರೆಂದು ಬೆಂಗಳೂರು ನಗರ ಪೊಲೀಸರು ಚಾಲ್ತಿಗೆ ತಂದಿರುವ ಬಿಸಿಪಿ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಚಿತ್ರಗಳನ್ನು ಕಂಡ ಪೊಲೀಸರು ಘಟನೆಯ ಸ್ಥಳ ಯಾವುದು ಎಂಬುದನ್ನು ಪರಿಶೀಲಿಸದೆ ದಂಡ ವಿಧಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆತನ ಕೃತ್ಯದಿಂದಾಗಿ ಗ್ರಾಮದ 60 ಮಂದಿ ಬೆಂಗಳೂರಿಗೆ ತಮ್ಮ ವಾಹನಗಳನ್ನು ತರದಿದ್ದರೂ, ಸಂಚಾರ ನಿಯಮ ಉಲ್ಲಂಘನೆಯ ಆರೋಪದಲ್ಲಿ ದಂಡಕ್ಕೆ ತುತ್ತಾಗಿದ್ದಾರೆ. ಲೋಕಶ್ ಮಾಡಿರುವ ಕೃತ್ಯದಿಂದ ನಾವು ದಂಡ ಕಟ್ಟುವುದಿಲ್ಲ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ.
“ಬಿಸಿಪಿ ಆ್ಯಪ್‌ಅನ್ನು ದುರ್ಬಳಕೆ ಮಾಡಿರುವ ಲೋಕೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ದಂಡವನ್ನು ಮನ್ನಾ ಮಾಡುವ ಕುರಿತು ಬೆಂಗಳೂರು ಪೊಲೀಸರೊಂದಿಗೆ ಚರ್ಚಿಸಲಾಗುವುದು” ಎಂದು ಸಿಪಿಐ ಕೃಷ್ಣ ಲಮಾಣಿ ಭರವಸೆ ನೀಡಿದ್ದಾರೆ.