ಪರಿಸರದ ಎಲ್ಲಾ ವ್ಯವಸ್ಥೆಯೂ ಮಲಿನವಾಗುತ್ತಿದೆ. ಈಗ ನೀರನ್ನು ಬಾಟಲಿಯಲ್ಲಿ ಬಳಸುತ್ತಿದ್ದೇವೆ. ಉಸಿರಾಡುವ ಗಾಳಿಯನ್ನೂ ಖರೀದಿಸುವ ಕಾಲ ದೂರವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್. ಹೊಸಮನಿ ಬೇಸರ ವ್ಯಕ್ತಪಡಿಸಿದರು.
ಕೋಲಾರ ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ, ಕರ್ನಾಟಕ ಯುವ ಮುನ್ನಡೆ ವತಿಯಿಂದ ಗುರುವಾರ ಆಯೋಜಿಸಿದ್ದ “ಯುವ ಸಿರಿ ಸಂವಿಧಾನ ಸಂಭ್ರಮ -2024 ಪರಿಸರಕ್ಕಾಗಿ ಯುವ ಧ್ವನಿ” ಹಬ್ಬದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ನಾಶ ತಡೆಗೆ ಅನೇಕ ಮಾಲಿನ್ಯ ನಿಯಂತ್ರಣ ಮಂಡಳಿಗಳು ಇದ್ದರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಆದರೆ, ನಾಗರಿಕರಾಗಿ ನಾವು ಪರಿಸರ ಉಳಿಸುವ ಕರ್ತವ್ಯ ಮರೆಯಬಾರದು. ವಿಧಿ 51( ಎ-ಜಿ) ಯಲ್ಲಿ ನದಿ, ಕೆರೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಜಿಲ್ಲೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವ ಬಾಲಕರು, ಯುವಜನರ ಸಂಖ್ಯೆ ಹೆಚ್ಚುತ್ತಲೆ ಇವೆ. ಇದು ಅಪರಾಧ. ಜಾಮೀನು ಇಲ್ಲದೆ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ. ಹಾಗಾಗಿ ನಿಮ್ಮ ಉತ್ತಮ ಭವಿಷ್ಯದ ಬಗ್ಗೆ ಕಾಳಜಿವಹಿಸಿ ಎಂದು ಸಲಹೆ ನೀಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ ಎಂದು ಗುರುತಿಸಿಕೊಂಡಿದ್ದ ಕೋಲಾರ ಇಂದು ಬರಪೀಡಿತವಾಗಿದೆ. ಪಂಚ ನದಿಗಳು ತುಂಬಿ ತುಳುಕುತ್ತಿದ್ದ ಈ ನೆಲದಲ್ಲಿ ಕೆರೆ ಜೋಡಣೆ, ಕಾಲುವೆ ಸಂಪರ್ಕ ವೈಜ್ಞಾನಿಕ ಜಾಲ ಪ್ರಪಂಚದ ಯಾವ ಭಾಗದಲ್ಲೂ ಇರಲಿಲ್ಲ ಎಂದು ಹೇಳಿದರು.
ಇಂದು ನದಿಗಳು ಭೂಪಟದಲ್ಲೂ ಕಾಣಿಸುತ್ತಿಲ್ಲ. ಕ್ಯಾಚ್ಮೆಂಟ್ ಏರಿಯಾಗಳನ್ನು ನಾಶ ಮಾಡಲಾಗುತ್ತಿದೆ. ರಾಜ ಕಾಲುವೆ ಮೇಲೆ ಒತ್ತುವರಿ ನಡೆಯುತ್ತಿದೆ. ಹಾಗಾಗಿ ಕೆರೆಗಳು ಬತ್ತಿ ಹೋಗುತ್ತಿವೆ. ಯಾವುದೇ ನಾಗರಿಕತೆ ಬೆಳೆಯುವುದೇ ನದಿ ಮೂಲಗಳಲ್ಲಿ. ಆದರೆ ನಮಗೆ ಈಗ ಯಾವ ಮೂಲಗಳಿವೆ? ಜೀವ ಸಂಕುಲಗಳಿಗೆ ನೀರು ಎಲ್ಲಿ ಸಿಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲವು ಸಂಶೋಧನೆಗಳ ಪ್ರಕಾರ ಕೋಲಾರ, ಚಿಕ್ಕಬಳ್ಳಾಪುರ ಕೊಳವೆ ಬಾವಿಗಳ ನೀರಿನಲ್ಲಿ ಯುರೇನಿಯಂ, ಫ್ಲೋರೈಡ್ ಕಂಡುಬಂದಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ವಿಷವನ್ನು ತಿಂದು ಕುಡಿವ ಸ್ಥಿತಿ ಇದೆ. ಬೆಂಗಳೂರಿಗೆ ಹೋಗುವ ತರಕಾರಿಗಳಲ್ಲಿ ಭಾರಿ ಲೋಹಗಳಿರುವುದು ವರದಿಯಾಗಿದ್ದು ಅದರ ಮೇಲೆ ಸುಮೊಟೊ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಕಸ, ತ್ಯಾಜ್ಯದ ನೀರು ಕೋಲಾರಕ್ಕೆ ಹಾಕುತ್ತಿದ್ದಾರೆ. ಇದನ್ನು ವಿರೋಧಿಸದೆ ಉದಾಸೀನ ತೋರಿದರೆ ಕೋಲಾರದ ನೆಲ ಮಾನವ ಸಂಕುಲ ಜೀವಿಸಲು ಯೋಗ್ಯವಾಗಿಲ್ಲ ಎಂದು ಘೋಷಿಸುವ ಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಂವಾದ ಸಹಕಾರ್ಯ ನಿರ್ವಾಹಕ ನಿರ್ದೇಶಕ, ಜನಕವಿ ಜನಾರ್ದನ್ ಕೆ ಮಾತನಾಡಿ, ಸುಸ್ಥಿರತೆ, ವೈವಿಧ್ಯತೆ, ಒಳಗೊಳ್ಳುವಿಕೆ ಸಂವಾದದಲ್ಲಿ ನಡೆಯುತ್ತದೆ. ಹಾಗಾಗಿ ಸಂವಾದ ಒಡನಾಡಿಗಳು ಕೋಣೆಯೊಳಗಿನ ಪಾಠ ಮಾತ್ರ ಅಲ್ಲ. ಪಾದಯಾತ್ರೆ, ಕುಣಿತ, ಅಧ್ಯಯನ, ಕ್ಷೇತ್ರ ಭೇಟಿಯ ಮೂಲಕವೂ ಜೀವನವನ್ನು ಕಲಿಯುತ್ತಾರೆ ಎಂದು ತಿಳಿಸಿದರು.
ಹವಾಮಾನ ವೈಪರೀತ್ಯದ ಪರಿಣಾಮ ಭೂಮಿ ತನ್ನನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆ ದುರಂತವಾಗಿದೆ. ಹಾಗಾಗಿ ಇದರ ಬಗ್ಗೆ ನಿರ್ಲಕ್ಷ್ಯ ತೋರದೆ ಪರಿಸರ ಉಳಿವಿನ ಬಗ್ಗೆ ಕಾಳಜಿವಹಿಸಬೇಕಿದೆ ಎಂದರು.
ಜಗತ್ತಿನಲ್ಲಿ ಬಡವ ಶ್ರೀಮಂತರ ಅಂತರ ಹೆಚ್ಚುತ್ತಿದ್ದು, ಅಂಚಿಗೆ ತಳ್ಳಲ್ಪಟ್ಟ ಯುವ ಸಮುದಾಯ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಿಂದ ದೂರ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಜನ ಸಬಲೀಕರಣ ಹೇಗೆ ಮಾಡಬೇಕೆಂಬುದನ್ನು ಎಲ್ಲಾ ದೇಶಗಳೂ ಚಿಂತಿಸುತ್ತಿವೆ. ರಾಜ್ಯದಲ್ಲಿ ಯುವಜನ ಗ್ರಾಮಸಭೆಗಳ ಮೂಲಕ ಯುವ ಸಬಲೀಕರಣಕ್ಕೆ ಸರ್ಕಾರಗಳು ಮುಂದಾಗಿದ್ದು ಯುವಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಟಿ, ಗಾಯಕಿ ವೈ ಜಿ.ಉಮಾ ಕೋಲಾರ ಸ್ಥಿತಿ ಬಗ್ಗೆ ವಿಶೇಷ ಗೀತೆಗಳನ್ನು ಹಾಡಿದರು. ಈ ನೆಲ ಈ ಜಲ ಸಾಂಸ್ಕೃತಿಕ ವೇದಿಕೆಯ ವೆಂಕಟಾಚಲಪತಿ, ಒಡನಾಡಿ ಶಿವಾಜಿ ಅರಿವಿನ ಹಾಡು ಹಾಡಿದರು.
ಕರ್ನಾಟಕ ಗಿನ್ನಿಸ್ ರೆಕಾರ್ಡ್ ನ ಕಲಾವಿದ ಪ್ರೇಮ್ ಶ್ರೀ ಶೇಖರ್ ಅವರು ಮಿಮಿಕ್ರಿ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ನಂತರ ಅಂಬೇಡ್ಕರ್ ಕುರಿತ ಗೀತೆಯನ್ನು ಮೂಗಿನಲ್ಲಿ ಶಹನಾಯ್ ನುಡಿಸುವ ಮೂಲಕ ಪ್ರಸ್ತುತಪಡಿಸಿದರು.
ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ದಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಸರ್ವರಿಗೂ ಸಂವಿಧಾನ ಅಭಿಯಾನಕ್ಕೆ ಮಂಗ್ಳೂರು ವಿಜಯ ಚಾಲನೆ
ಗಮನ ಮಹಿಳಾ ಸಮೂಹದ ಶಾಂತಮ್ಮ, ರೈತ ಮುಖಂಡ ಅಬ್ಬಣಿ ಶಿವಪ್ಪ, ಯಂಗ್ ಇಂಡಿಯಾ ಡೆವೆಲಪ್ ಮೆಂಟ್ ನ ಹೂಹಳ್ಳಿ ನಾಗರಾಜ್, ಪ್ರೊ.ಅರಿವು ಶಿವಪ್ಪ, ಯುವ ರೈತ ಮುಖಂಡ ಆನಂದ್, ಸಂವಾದ ಸಿಬ್ಬಂದಿ ರಾಮಕ್ಕ, ಮಂಜುಳಾ, ಸುನೀಲ್ ಇದ್ದರು.