ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ ಹಾಗೂ ಪರಿಸರವಾದಿಯಾಗಿ ಗುರುತಿಸಿಕೊಂಡಿದ್ದ ಭೂಹಳ್ಳಿ ಪುಟ್ಟಸ್ವಾಮಿ (76) ಅವರು ಫೇಸ್‌ಬುಕ್ ಪೋಸ್ಟ್ ಹಾಕಿ ಭಾನುವಾರ ತಡರಾತ್ರಿ ಚನ್ನಪಟ್ಟಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಪುಟ್ಟಸ್ವಾಮಿ ಅವರ ಕುಟುಂಬ ಮೈಸೂರಿನಲ್ಲಿ ನೆಲೆಸಿತ್ತು. ಆದರೆ, ಪುಟ್ಟಸ್ವಾಮಿ ಅವರು ಮಾತ್ರ ಚನ್ನಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಆಗಾಗ ಮೈಸೂರಿಗೆ ಹೋಗಿ ಬರುತ್ತಿದ್ದರು ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.
ಭೂಹಳ್ಳಿ ಪುಟ್ಟಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಾಮಾಜಿಕ ಹೋರಾಟಗಾರ ವಡ್ಡಗೆರೆ ನಾಗರಾಜಯ್ಯ, “ನನ್ನ ಬಹುಕಾಲದ ಆತ್ಮೀಯ ಕವಿ ಗೆಳೆಯ ‘ಕವಿವನ’ ‘ಜೀವೇಶ್ವರ’ ‘ಬುದ್ದೇಶ್ವರ’ ಸ್ಥಾಪಕ, ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ ಅವರು ಅನಾರೋಗ್ಯ ಸಮಸ್ಯೆಯನ್ನು ಎದುರಿಸಲಾಗದೆ ನಿನ್ನೆ ರಾತ್ರಿ 2:40 ರಲ್ಲಿ ತನ್ನ ಸಾವಿಗೆ ತಾನೇ ಕಾರಣವೆಂದು ಫೇಸ್‌ಬುಕ್ ಪೋಸ್ಟ್ ಬರೆದು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.” ಎಂದು ತಿಳಿಸಿದ್ದಾರೆ.
ಅವರ ಪಾರ್ಥೀವ ಶರೀರ ಈಗ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿದೆ. ಅಂತಿಮ ಸಂಸ್ಕಾರವು ಸೋಮವಾರ ಸಂಜೆ 4 ರ ನಂತರ ಮಾಡಲಾಗುವುದೆಂದು ಅವರ ಅಣ್ಣನ ಮಗ ಮಹೇಶ್ ಮಾಹಿತಿ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ನೇಣಿಗೆ ಶರಣಾಗಿದ್ದು, ಸ್ವಗ್ರಾಮದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಆಪ್ತರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ಪುಟ್ಟಸ್ವಾಮಿ ಅವರು ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು. ಸುಮಾರು 25ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಳ್ಳಿ ಮನೆ ಲುಂಬಿನಿ, ನೂರು ಸ್ವರ, ಎಲ್ಲರ ಹೆಜ್ಜೆ, ಭಾವ ಮಂಜರಿ, ನೆಲದ ಕಂಬನಿ, ಸ್ವಾತಂತ್ರ್ಯಕ್ಕೆ ಜೀವವಿದೆ, ಗೋಜಲು, ಬೆಳದಿಂಗಳ ಕುಡಿ, ಲಾವಣಿ ಹಾಡು, ಅಕ್ಷರ ಗುಡಿ ನಾಟಕ, ಅಗ್ರಹಾರ ಬೀದಿಗಳಲ್ಲಿ…ಹೀಗೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಆಸಕ್ತರ ಮೆಚ್ಚುಗೆ ಗಳಿಸಿದ್ದರು.
ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಸಾಹಿತ್ಯ ಕೌಸ್ತುಭ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪುಟ್ಟಸ್ವಾಮಿ ಭಾಜನರಾಗಿದ್ದರು.
ಕವಿ, ಪರಿಸರವಾದಿ, ಸಮಾಜಮುಖಿ ಚಿಂತಕ, ನಿವೃತ್ತ ಪ್ರಾಧ್ಯಾಪಕರಾಗಿದ್ದ ಪುಟ್ಟಸ್ವಾಮಿ ಅವರು, ಸ್ವಂತ ಹಣದಲ್ಲಿ ಚನ್ನಪಟ್ಟಣ ತಾಲೂಕಿನ ವಿವಿಧೆಡೆ ಸರ್ಕಾರಿ ಜಾಗಗಳಲ್ಲಿ ಗಿಡನೆಟ್ಟು ಬೋಳು ಜಾಗ ಮತ್ತು ಭೂಮಿಯನ್ನೆಲ್ಲಾ ವನವನ್ನಾಗಿಸುತ್ತಾ ಬಂದಿದ್ದರು . ಇವರಿಂದಾಗಿ ಸುಮಾರು 40 ಎಕರೆ ಜಾಗವು ಹಸಿರು ಹೊದ್ದು ನಿಂತಿದೆ.
ಬುದ್ಧವನ, ಬುದ್ದೇಶ್ವರ ವನ (ಕವಿವನ), ಜೀವೇಶ್ವರ ವನ, ಪುಲಕೇಶಿ ವನ, ನೃಪತುಂಗ ವನ, ಕದಂಬವನ, ಗಾಂಧಿ ವನ, ಅಂಬೇಡ್ಕರ್ ವನ ಹೀಗೆಲ್ಲಾ ವನಗಳಿಗೆ ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ಬುದ್ದೇಶ್ವರ ವನದಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿಯೇ ಸ್ವಂತ ಹಣದಲ್ಲಿ ವೇದಿಕೆ ನಿರ್ಮಿಸಿ ಕೊಟ್ಟಿದ್ದಾರೆ. ಗ್ರಂಥಾಲಯಕ್ಕಾಗಿ ಕೊಠಡಿ ಕಟ್ಟಿಸಿದ್ದಾರೆ. ನೂರು ಜನ ಕುಳಿತುಕೊಳ್ಳಬಹುದಾದಷ್ಟು ಸಿಮೆಂಟಿನ ಬೆಂಚುಗಳ ವ್ಯವಸ್ಥೆ ಮಾಡಿದ್ದಾರೆ. ಭೂಹಳ್ಳಿ ಪುಟ್ಟಸ್ವಾಮಿ ಟ್ರಸ್ಟ್ ಸ್ಥಾಪನೆ ಮಾಡಿಕೊಂಡು ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಭೂಹಳ್ಳಿ ಪುಟ್ಟಸ್ವಾಮಿಯವರು ಈ ರೀತಿ ನಿರ್ಧಾರ ತೆಗೆದುಕೊಂಡು, ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಆಪ್ತ ವಲಯಕ್ಕೆ ಆಘಾತ ಉಂಟು ಮಾಡಿದೆ.
