2019ರಲ್ಲಿ ಕೊರೋನಾ ಎಂಬ ಮಹಾಮಾರಿ ದೇಶಕ್ಕೆ ಲಗ್ಗೆಯಿಟ್ಟು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ಕಳೆದ ಎರಡು ವರ್ಷಗಳಿಂದ ದೂರವಾಗಿದ್ದ, ಈ ಸಾಂಕ್ರಾಮಿಕ ರೋಗ ಇದೀಗ ಮತ್ತೆ ಲಗ್ಗೆಯಿಟ್ಟಿದೆ. ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ರಾಜ್ಯದಲ್ಲೂ ಸೋಂಕು ದಿನೇದಿನೆ ಏರಿಕೆಯಾಗುತ್ತಿದೆ. ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಸಕ್ರಿಯ (2041) ಪ್ರಕರಣಗಳಿಂದ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನಕ್ಕೆ(92) ಏರಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ದೇಶದಲ್ಲಿ ನಿತ್ಯ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿದ್ದು, ಡಿ.6ರಂದು ಕೇವಲ 587 ಇದ್ದ ಸಕ್ರಿಯ ಪ್ರಕರಣ ಡಿ.20ರ ಮಧ್ಯಾಹ್ನ 12 ಗಂಟೆ ವೇಳೆಗೆ 2,311ಕ್ಕೆ ತಲುಪಿದೆ. ಅಂದರೆ ಕೇವಲ ಎರಡೇ ವಾರದಲ್ಲಿ ಆರು ಪಟ್ಟು ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 19 ಹೊಸ ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿವೆ.
ದೇಶದಲ್ಲಿ ಕೋವಿಡ್ ಉಪತಳಿ ಜೆಎನ್ 1 ಮೊದಲ ಪ್ರಕರಣ ಪತ್ತೆಯಾಗಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತೆ ವಹಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಇದೀಗ ಕರ್ನಾಟಕದಲ್ಲಿಯೂ ಕೋವಿಡ್ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಕರ್ನಾಟಕದಲ್ಲಿ ಕೋವಿಡ್ ಸೋಂಕು
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಡಿ.18 ರಂದು ಒಂದೇ ದಿನ 27 ಪ್ರಕರಣ ವರದಿಯಾಗಿದ್ದರೆ, ಡಿ.19 ರಂದು 44 ಪ್ರಕರಣ ವರದಿಯಾಗಿವೆ. ಡಿ.20 ರಂದು 22 ಪ್ರಕರಣ ವರದಿಯಾಗಿದ್ದು, ಬೆಂಗಳೂರಿನಲ್ಲಿ 19, ಬಳ್ಳಾರಿ 2, ದಕ್ಷಿಣ ಕನ್ನಡದಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಶೇ.1.72 ಪಾಸಿಟಿವಿಟಿ ದರವಿದ್ದು, ಸರಾಸರಿ 17 ಪ್ರಕರಣ ವರದಿಯಾಗುತ್ತಿವೆ.
ರಾಜ್ಯದಲ್ಲಿನ 92 ಸೋಂಕಿತರಲ್ಲಿ 72 ಮಂದಿ ಹೋಂ ಐಸೊಲೇಷನ್ನಲ್ಲೇ ಇದ್ದಾರೆ. ಉಳಿದಂತೆ 20 ಮಂದಿ ಆಸ್ಪತ್ರೆಯಲ್ಲಿದ್ದು, ಈ ಪೈಕಿ 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ ಏರಿಕೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ನಡೆಸಿದ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ 359 ಮಂದಿ ಪೈಕಿ 19 ಜನರಲ್ಲಿ ಸೋಂಕು ಇರುವುದು ದೃಢವಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯದಲ್ಲಿ ಡಿಸೆಂಬರ್ 1ರಿಂದ 19ರ ಅವಧಿಯಲ್ಲಿ ಒಟ್ಟು 59 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಕೋವಿಡ್ಗೆ ಬೆಂಗಳೂರಿನ ಚಾಮರಾಜಪೇಟೆಯ 77 ವರ್ಷದ ವ್ಯಕ್ತಿ ಡಿಸೆಂಬರ್ 17ರಂದು ಸಾವನ್ನಪ್ಪಿದರೆ, ಡಿಸೆಂಬರ್ 16ಕ್ಕೆ ಬೆಂಗಳೂರಿನಲ್ಲಿ 44 ವರ್ಷದ ವ್ಯಕ್ತಿಯೊಬ್ಬರು ಕೊರೋನಾಗೆ ಜೀವಬಿಟ್ಟಿದ್ದಾರೆ.
ಡಿ.16 ರಂದು 5 ಪ್ರಕರಣ, ಡಿ.17ರಂದು 4, ಡಿ.18ರಂದು 13 ಹಾಗೂ ಡಿ.19ರಂದು 17 ಪ್ರಕರಣ ಕಾಣಿಸಿಕೊಂಡಿವೆ.
ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯ ಪರೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಔಷಧ, ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೇ, ಕೊವಿಡ್ ಟೆಸ್ಟ್ ಹೆಚ್ಚಿಸಲು ಅಧಿಕಾರಿಗಳು, ಸಿಬ್ಬಂದಿಗೆ ಸೂಚಿಸಲಾಗಿದೆ.
ವಿಶ್ವದಾದ್ಯಂತ ನಿತ್ಯ 51,214 ಸರಾಸರಿ ವರದಿಯಾಗುತ್ತಿದ್ದು 2.16 ಕೋಟಿ ಸಕ್ರಿಯ ಸೋಂಕಿತರು ವಿಶ್ವದಾದ್ಯಂತ ಇದ್ದಾರೆ. ಈ ಪೈಕಿ ಬ್ರೆಜಿಲ್ 11.73 ಲಕ್ಷ, ಅಮೆರಿಕ 9.89 ಲಕ್ಷ, ವಿಯೆಟ್ನಾಂ 9.39 ಲಕ್ಷದಷ್ಟಿದೆ. ವಿಶ್ವದ ಒಟ್ಟಾರೆ ಪ್ರಕರಣಗಳಲ್ಲಿ ಭಾರತದಲ್ಲಿ ಶೇ.0.009 ರಷ್ಟು ಮಾತ್ರ ಇವೆ. ಹೀಗಾಗಿ ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ. ಆದರೆ, ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹20 ಕೋಟಿ ಮೌಲ್ಯದ 99 ಕೊಕೇನ್ ಕ್ಯಾಪ್ಸುಲ್ಗಳನ್ನು ನುಂಗಿದ್ದ ನೈಜೀರಿಯನ್ ಪ್ರಜೆ ಬಂಧನ
ರಾಜ್ಯದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತೆ ಹಾಗೂ ಪೂರ್ವಭಾವಿ ಕ್ರಮಗಳ ಕುರಿತು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ಮಾರ್ಗಸೂಚಿ
- ಎಲ್ಲ ಹಿರಿಯ ನಾಗರಿಕರು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ತೆರಳಬೇಡಿ.
- ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆ ಪಡೆಯಬೇಕು.
- ಆಗಾಗ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು.
- ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ, ಮನೆಯಲ್ಲಿರುವುದು ಸೂಕ್ತ, ಇತರ ವ್ಯಕ್ತಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರಿಕರು / ದುರ್ಬಲರನ್ನು ಅವಶ್ಯವಿದ್ದಲ್ಲಿ, ಮಾತ್ರವೇ ಭೇಟಿ ಮಾಡುವುದು.
- ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದ ಒಳಗೆ ಮಾಸ್ಕ್ ಧರಿಸುವುದು.
ಔಷಧ, ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಕೋವಿಡ್ ಟೆಸ್ಟ್ ಹೆಚ್ಚಿಸಲು ಸೂಚಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರನ್ನು ಒಳಗೊಂಡ ಸಲಹಾ ಸಮಿತಿ ಸಭೆ ಗುರುವಾರ ನಡೆಸಿದೆ.