ಹುಣಸೂರಿನಲ್ಲಿ ನಡೆದಿದ್ದ ಕೊಡಗು ಮೂಲದ ಎಸ್ಟೇಟ್ ಮಾಲೀಕ ಚಂಗಪ್ಪ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತನ ಸ್ನೇಹಿತನೇ ಆಗಿದ್ದ ಆರೋಪಿ ಹಣಕ್ಕಾಗಿ ಕೊಲೆ ಮಾಡಿದ್ದನೆಂದು ತಿಳಿದುಬಂದಿದೆ.
ಚಂಗಪ್ಪ ಅವರ ಸ್ನೇಹಿತ ಸತೀಶ್ ದುಬೆ ಬಂಧಿತ ಆರೋಪಿ. ಸತೀಶ್ ಮೂಲತ: ಉತ್ತರಪ್ರದೇಶದವನಾಗಿದ್ದು, ಬೆಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ. ತಾನೇ ಹಣಕ್ಕಾಗಿ ಚಂಗಪ್ಪನನ್ನು ಕೊಲೆ ಮಾಡಿದ್ದಾಗಿ ಸತೀಶ್ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಡಿಸೆಂಬರ್ 20ರಂದು ಹುಣಸೂರಿನ ಭವಾನಿ ಸಿಮೆಂಟ್ ಕಾರ್ಖಾನೆಯಲ್ಲಿ ಚಂಗಪ್ಪನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಡಿಸೆಂಬರ್ 19ರಂದು ಕೊಡಗು ಜಿಲ್ಲೆಯ ಪಾಲಿಬೆಟ್ಟದ ಯಡಿಯೂರಿಗೆ ಸತೀಶ್ ದುಬೆ ಮತ್ತು ಚಂಗಪ್ಪ ಬೆಂಗಳೂರಿನಿಂದ ಬಂದಿದ್ದರು. ಅಂದು ರಾತ್ರಿ ಹಣಸೂರಿನಲ್ಲಿ ರೂಮ್ ಮಾಡಿಕೊಂಡು ಉಳಿದುಕೊಂಡಿದ್ದರು. ಬಾರ್‌ಗೆ ತೆರಳಿದ್ದ ಅವರು ಅಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ, ಇಟ್ಟಿಗೆ ಕಾರ್ಖಾನೆ ಬಳಿ ಬಂದಿದ್ದಾರೆ. ಅಲ್ಲೂ ಕೂಡ ಮಾತಿಗೆ ಮಾತು ಬೆಳೆದು ಚಂಗಪ್ಪನನ್ನು ಸತೀಶ್ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.