ಭಾಲ್ಕಿ ತಾಲೂಕಿನ ನಿಟ್ಟೂರ್ (ಬಿ) ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಉದ್ಘಾಟನೆಯಾಗಿ ಒಂದು ವರ್ಷ ಗತಿಸಿದ್ದರೂ ಇಲ್ಲಿಯವರೆಗೆ ಒಂದೂ ಬಸ್ ಅಲ್ಲಿ ಸುಳಿದಿಲ್ಲ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ನಿಲ್ದಾಣ ಸಾರಿಗೆ ಸಂಸ್ಥೆ ಅಧಿಕಾರಿಗಳ ಉದಾಸೀನತೆ ಮತ್ತು ಗ್ರಾಮಸ್ಥರ ಅಸಹಕಾರದಿಂದಾಗಿ ಬಸ್ ನಿಲ್ದಾಣ ಅನಾಥವಾಗಿದೆ.
ಭಾಲ್ಕಿ ಶಾಸಕರಾದ (ಈಗ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ) ಈಶ್ವರ ಬಿ. ಖಂಡ್ರೆ ಅವರು ಪ್ರಯಾಣಿಕರಿಗೆ ಮೂಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಿಂದ ಕಟ್ಟಡ ನಿರ್ಮಿಸಿದರು. ಕಳೆದ ವಿಧಾನಸಭಾ ಚುನಾವಣೆಯ ಮುಂಚೆ ಉದ್ಘಾಟನೆ ಸಹ ನೆರೆವೇರಿಸಿದ್ದರು. ಆದರೆ ಇಲ್ಲಿಯವರೆಗೆ ಬಸ್ ನಿಲ್ದಾಣ ಸಾರ್ವಜನಿಕರಿಗೆ ಉಪಯೋಗವಿಲ್ಲದೆ ಹಾಳಾಗುತ್ತಿದೆ.

ಭಾಲ್ಕಿ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ನಿಟ್ಟೂರ ಜಿಲ್ಲಾ ಪಂಚಾಯಿತಿ ಕ್ಷೇತ್ರವೂ ಹೌದು. ಇಲ್ಲಿ ಖಾಸಗಿ, ಅನುದಾನಿತ ಪಿಯು ಹಾಗೂ ಪದವಿ ಕಾಲೇಜುಗಳಿವೆ. ದಿನನಿತ್ಯ ಸುತ್ತಲಿನ ಕೊಟಗ್ಯಾಳ, ಬಾಳೂರ, ಗೋರನಾಳ, ಚಂದಾಪುರ, ಕೂಡ್ಲಿ, ಹಜನಾಳ, ಮುರಾಳ, ನಿಟ್ಟೂರ್(ಕೆ) ಸೇರಿದಂತೆ ಇತರೆ ಔರಾದ್ ತಾಲೂಕಿನ ಕೆಲ ಗ್ರಾಮಗಳ ವಿದ್ಯಾರ್ಥಿಗಳು ಬರುತ್ತಾರೆ. ಇನ್ನು ಕಂದಾಯ, ಕೃಷಿ, ಬ್ಯಾಂಕ್, ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ನೂರಾರು ಜನರು ಆಗಮಿಸುತ್ತಾರೆ. ಆದರೆ ನಿಲ್ದಾಣದಲ್ಲಿ ಬಸ್ ಬಾರದಿರುವ ಕಾರಣ ಪ್ರಯಾಣಿಕರು ಎಂದಿನಂತೆ ರಸ್ತೆ ಪಕ್ಕದ ಅಂಗಡಿ ಮುಂಗ್ಗಟ್ಟುಗಳಲ್ಲಿಯೇ ನಿಲ್ಲಬೇಕಾದ ಅನಿವಾರ್ಯತೆ ಇದೆ.
ಉದ್ಘಾಟನೆಯಾದ ಹೊಸ ಬಸ್ ನಿಲ್ದಾಣ ಸದ್ಯದ ಅನಧಿಕೃತ ಬಸ್ ನಿಲುಗಡೆಯ ಸ್ಥಳದಿಂದ ಕೂಗಳತೆಯ ಅಂತರದಲ್ಲಿದೆ. ಆದರೆ ಮೊದಲಿನಿಂದಲೂ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ್ ಮುಖ್ಯ ವೃತ್ತದ ಬಳಿ ಸಾರಿಗೆ ಹಾಗೂ ಖಾಸಗಿ ಬಸ್ ಒಂದೇ ಸ್ಥಳದಲ್ಲಿ ನಿಲ್ಲುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇನ್ನು ಶುಕ್ರವಾರ ಸಂತೆ ಇರುವ ಕಾರಣ ಸಂಚಾರ ದಟ್ಟಣೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳಿಗೆ ಅಡ್ಡಿಯಾಗುತ್ತಿದೆ. ಹಳ್ಳಿಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಮಳೆ, ಬಿಸಿಲಿನಲ್ಲೇ ಬಸ್ಸಿಗಾಗಿ ಕಾಯಬೇಕು.
ಯಾವ ಉದ್ದೇಶಕ್ಕಾಗಿ ಈ ನಿಲ್ದಾಣವನ್ನು ಕಟ್ಟಲಾಗಿತ್ತೋ ಅದು ವ್ಯರ್ಥವಾಗಿದ್ದು, ಇಲ್ಲಿರುವ ವಿದ್ಯುತ್ ದೀಪ, ಶೌಚಾಲಯ ಮತ್ತು ಕೋಣೆಗಳು ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದೆ. ಈಗ ಬಸ್ ನಿಲ್ದಾಣದ ಕೋಣೆಯಲ್ಲಿ ಜೆಜೆಎಂ ಕಾಮಗಾರಿಯ ಸಾಮಾಗ್ರಿಗಳು ಶೇಖರಿಸಿ ಬಳಕೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳು ಜಾಣಕುರುಡು ತೋರಿದರೆ ಸಾರ್ವಜನಿಕರ ದುಡ್ಡು ಹೇಗೆ ಹಾಳಾಗುತ್ತದೆ ಎಂಬುದಕ್ಕೆ ಈ ಬಸ್ ನಿಲ್ದಾಣವೇ ಸಾಕ್ಷಿ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಈ ಕುರಿತು ಕೆಕೆಆರ್‌ಟಿಸಿ ಭಾಲ್ಕಿ ತಾಲೂಕು ಬಸ್ ಘಟಕದ ವ್ಯವಸ್ಥಾಪಕ ಭದ್ರಪ್ಪ ಹುಡುಗೆ ಅವರು ಈದಿನ.ಕಾಮ್ ಜೊತೆ ಮಾತನಾಡಿ, ʼನಿಟ್ಟೂರ್(ಬಿ) ಬಸ್ ನಿಲ್ದಾಣ ತರಾತುರಿಯಲ್ಲಿ ಉದ್ಘಾಟಿಸಲಾಗಿದೆ. ಇನ್ನು ಒಂದಿಷ್ಟು ಕಾಮಗಾರಿ ಬಾಕಿಯಿದೆ. ಈ ಕುರಿತು ವಿಚಾರಿಸುವೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ಯಾಚಾರಿಗೆ ಶಿಕ್ಷೆ; ನುಡಿದಂತೆ ನಡೆಯಲಿ ನರೇಂದ್ರ ಮೋದಿ
ʼಬಸ್ ನಿಲ್ದಾಣ ಪ್ರಯಾಣಿಕರಲ್ಲಿ ಹೊಸ ಕನಸು ಬಿತ್ತಿತ್ತು. ಆದರೆ ವರ್ಷ ಕಳೆದರೂ ನಿಲ್ದಾಣ ಇದ್ದೂ ಇಲ್ಲದಂತಾಗಿದೆ. ನಿಗದಿತ ಸಮಯಕ್ಕೆ ಬಸ್ ಇರುವ ಕಾರಣ ವಿದ್ಯಾರ್ಥಿಗಳು ಗಂಟೆಗಟ್ಟಲೇ ರಸ್ತೆ ಮೇಲೆ ನಿಂತು ಕಾಯಬೇಕು. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಸ್ ನಿಲ್ದಾಣ ಪ್ರಯಾಣಿಕರ ಸೇವೆಗೆ ಒದಗಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಗ್ರಾಮದ ವಿದ್ಯಾರ್ಥಿ ಜಾವೀದ್ ಒತ್ತಾಯಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.