ಪ್ರಜಾಪ್ರಭುತ್ವದ ಬಲಿಷ್ಠತೆಗಾಗಿ ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ರವಿವಾರ ಮತದಾನ ಜಾಗೃತಿಗಾಗಿ ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಬೀದರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, “ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ ಕಾರ್ಯಕ್ರಮ ಬೀದರ ನಗರದಲ್ಲಿ ಮಾತ್ರವಲ್ಲದೆ ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ವ್ಯಾಪ್ತಿಯ ಜಿಲ್ಲಾ, ತಾಲೂಕು ಮತ್ತು ಗ್ರಾಮಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
“ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲು ಎಲ್ಲ ಮತಗಟ್ಟೆಗಳಲ್ಲಿ ಏ.28 ರಿಂದ ಮೇ 7 ರವರೆಗೆ ಮತದಾನದ ದಿನದವರೆಗೆ ಬಿಎಲ್‌ಓಗಳು ಮತಗಟ್ಟೆಗಳ ಮೇಲೆ ಧ್ವಜಾರೋಹಣ ಮಾಡುವರು. ಧ್ವಜದ ವಿನ್ಯಾಸ ಮತದಾನ ದಿನ ಮೇ7 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಗಳವರೆಗೆ ಎಂದು ಬಟ್ಟೆಗಳ ಮೇಲೆ ಮುದ್ರಿಸಿದ ಧ್ವಜದ ವಿನ್ಯಾಸ ಇರಲಿದೆ” ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಅಧ್ಯಕ್ಷ ಡಾ. ಗಿರೀಶ್ ಬದೋಲೆ ಮಾತನಾಡಿ, “ಬೀದರ ಲೋಕಸಭಾ ಕ್ಷೇತ್ರದ ಜನರು ಈ ಸಲ ಹೆಚ್ಚಿನ ಮತದಾನ ಮಾಡಬೇಕು. ಕಳೆದ ಚುನಾವಣೆಯಲ್ಲಿ ಶೇ.64 ರಷ್ಟು ಮತದಾನವಾಗಿತ್ತು. ಈ ಸಲ ಶೇ.80 ರಷ್ಟು ಹೆಚ್ಚಿನ ಮತದಾನ ಆಗಬೇಕೆಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, “ಚುನಾವಣೆಯಲ್ಲಿ ಶೇ.100 ರಷ್ಟು ಮತದಾನವಾದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆ ದಿನದಂದು ಎಲ್ಲರೂ ಮತ ಹಕ್ಕು ಚಲಾಯಿಸಿ” ಎಂದು ಹೇಳಿದರು.
ಸೈಕಲ್ ಜಾಥಾಕ್ಕೆ ಬೀದರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಚಾಲನೆ ನೀಡಿದರು. ಬಳಿಕ ಬೀದರ್ ಕೋಟೆಯಿಂದ ನೆಹರು ಕ್ರೀಡಾಂಗಣದವರೆಗೆ ನಡೆಯಿತು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್ಲರಿಗೂ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿಗೆ ಖಾಲಿ ಚೊಂಬು ನೀಡುತ್ತಾರೆ : ರಣದೀಪ್ ಸಿಂಗ್ ಸರ್ಜೇವಾಲಾ
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ಪೀಪ್ ನೋಡಲ್ ಅಧಿಕಾರಿ ಗೌತಮ ಅರಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕ ಸಲೀಂ ಪಾಶಾ, ರೋಟರಿ ಕ್ಲಬ್ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.