ಕೇಂದ್ರದ ಬಿಜೆಪಿ ಸರ್ಕಾರ ದೇಶದಲ್ಲಿ ಗುತ್ತಿಗೆ ಪದ್ದತಿ ಜಾರಿಗೆ ತಂದು ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಕಾರ್ಮಿಕರು ಹಗ್ಗಕ್ಕೆ ಕೊರಳೊಡ್ಡಿದಂತಾಗುತ್ತದೆ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.
ಕರ್ನಾಟಕ ರಾಜ್ಯ ಟ್ರೇಡ್ ಯುನಿಯನ್ ಸೆಂಟರ್ ಆಫ್ ಇಂಡಿಯಾ ವತಿಯಿಂದ ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ 9ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಡೆದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು .
“ಕೇಂದ್ರ ಸರ್ಕಾರ ಹಿಂದುತ್ವ, ಜಾತಿವಾದಿ, ಪ್ಯಾಸಿಸ್ಟ್ ಆಡಳಿತ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುಂಚೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದರು, ಅಧಿಕಾರಕ್ಕೆ ಬಂದು ಉದ್ಯೋಗ ಸೃಷ್ಠಿಸುವ 16 ಸಾರ್ವಜನಿಕ ಸಂಸ್ಥೆ ಮಾರಾಟ ಮಾಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಗುತ್ತಿಗೆ ಕಾರ್ಮಿಕ ಪದ್ದತಿ ಜಾರಿಗೆ ತಂದು ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ನೀಡದೇ ದುಡಿಯುವ ಜನರ ಶೋಷಣೆ ಮಾಡುತ್ತಿದ್ದಾರೆ. 44 ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆ ಜಾರಿಗೆ ತಂದಿದ್ದಾರೆ” ಎಂದು ದೂರಿದರು.
“ದೇಶದ ಅಭಿವೃದ್ಧಿಗಾಗಿ ಕಾರ್ಮಿಕರು ಶ್ರಮಿಸಿದರೆ ಬಂಡವಾಳಶಾಹಿಗಳು ಕಾರ್ಮಿಕರ ರಕ್ತ ಹೀರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಬಂಡವಾಳಶಾಹಿಗಳ ಪರ ದಲ್ಲಾಳಿಯಂತೆ ಕೆಲಸ ಮಾಡುತ್ತಿದ್ದಾರೆ. ಜಿಎಸ್‌ಟಿ ಜಾರಿಯಿಂದ ಸಣ್ಣ ಕೈಗಾರಿಕೆಗಳು ಮುಚ್ಚಿವೆ. ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ನಾಗರಿಕರನ್ನು ವಿಭಜಿಸುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು ಧರ್ಮದ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ. ಕಾರ್ಮಿಕರು ದೇಶದಲ್ಲಿ ನಡೆಯುವ ವಿದ್ಯಾಮಾನ ಅರ್ಥೈಸಿಕೊಂಡು ಜಾಗೃತರಾಗಬೇಕು” ಎಂದು ಎಚ್ಚರಿಸಿದರು.
ಸಮಾವೇಶಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರಗೆ ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಈ ಸುದ್ದಿ ಓದಿದ್ದೀರಾ? ಎಬಿಪಿಎಸ್ ಕಡ್ಡಾಯಗೊಳಿಸಿದ ಕೇಂದ್ರ; ಮನರೇಗಾ ಉದ್ಯೋಗದಿಂದ 1.78 ಕೋಟಿ ಕಾರ್ಮಿಕರು ವಂಚಿತ
ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ವರದರಾಜೇಂದ್ರ, ಅಮೀರ್ ಅಲಿ, ಕಂದಗಲ ಶ್ರೀನಿವಾಸ, ರುಕ್ಮಿಣಿ, ಟಿಯುಸಿಐ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಅಮರೇಶ, ಕೆ.ಕೃಷ್ಣಪ್ಪ, ಸಂಗಪ್ಪ, ಅಜೀಜ್ ಜಾಗೀರದಾರ, ಎಸ್ಆರ್ ಮಂಜುನಾಥ ಸೇರಿದಂತೆ ಕಾರ್ಮಿಕರು, ಸಂಘಟಕರು, ಸಾಮಾಜಿಕ ಕಾರ್ಯಕರ್ತರು ಇದ್ದರು.