ಹೇಮಾವತಿ ನೀರು ಜಿಲ್ಲೆಯ ಜೀವನಾಡಿಯಾಗಿದೆ. ಕೃಷಿಕರ ಬಾಳಿಗೆ ಬೆಳಕಾಗಿ ಬಂದ ನದಿ ನೀರನ್ನು ಮಾಗಡಿಯತ್ತ ಕೊಂಡೊಯ್ಯುವ ಕೆಲಸ ಮಾಡಿದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ನಡೆ ರೈತ ವಿರೋಧಿಯಾಗಿದೆ. ಯಾವುದೇ ಕಾನೂನು ಕ್ರಮ ಇಲ್ಲದ ಕಾಮಗಾರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಜರಾಯಿ ದೇವಾಲಯಕ್ಕೆ ಸಂಬಂಧಿಸಿದ ಜಮೀನನ್ನು ವಶಕ್ಕೆ ಪಡೆದು ಕೆಲಸ ಮಾಡಲಾಗುತ್ತಿದೆ. ಇದನ್ನು ತಡೆಯಬೇಕಾದ ತಾಲ್ಲೂಕು ಆಡಳಿತವೇ ಗುತ್ತಿಗೆದಾರರ ಪರ ನಿಂತು ಸ್ಥಳದಲ್ಲಿ ಹಾಜರಿದ್ದು ಕೆಲಸ ನಡೆಸಿದೆ. ಇದು ಅನ್ಯಾಯ ರೈತ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘದ ಸದಸ್ಯರು ದಿಢೀರ್ ರಸ್ತೆಗಿಳಿದು ಕೆಲ ಕಾಲ ಹೆದ್ದಾರಿ ನಡೆಸಿ ಪ್ರತಿಭಟಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ರೈತ ಸಂಘದ ಸದಸ್ಯರು ದಿಢೀರ್ ಬಸ್ ಸ್ಟ್ಯಾಂಡ್ ಬಳಿ ತೆರಳಿ ರಸ್ತೆಗಿಳಿದು ಪ್ರತಿಭಟಿಸಿದ ರೈತರನ್ನು ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಹೇಮಾವತಿ ಮುಖ್ಯನಾಲೆಯಿಂದ ಅಷ್ಟೇ ತೆಗೆದುಕೊಂಡು ಹೋಗಬೇಕು. ನೀರು ಹಂಚಿಕೆ ಆದೇಶದ ಬಳಿಕ ನೀರು ಹರಿಸುವ ಮುನ್ನ ಇಡೀ ಕಾಮಗಾರಿಯನ್ನು ಅಕ್ರಮವಾಗಿ ಆರಂಭಿಸಿ ಸಾವಿರ ಕೋಟಿ ರೂಗಳನ್ನು ಮಂಜೂರು ಮಾಡಿ ಉಪ ಮುಖ್ಯಮಂತ್ರಿಗಳು ತಮ್ಮ ಪ್ರಭಾವ ಬೀರಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಇದನ್ನು ನೋಡಿಯೂ ನೋಡದಂತೆ ಶಾಸಕರು, ಸಚಿವರು ಸುಮ್ಮನಿರುವುದು ವಿಪರ್ಯಾಸ. ಸರ್ಕಾರಿ ಜಾಗದಲ್ಲಿ ಕೆಲಸ ಮಾಡಲು ಇದುವರೆವಿಗೂ ಆದೇಶವಿಲ್ಲ. ಅಕ್ರಮವಾಗಿ ಕೆಲಸ ನಡೆಯಲು ಅಧಿಕಾರಿಗಳೇ ಮುಂದಾಳತ್ವ ವಹಿಸಿರುವುದು ರೈತರ ದೌರ್ಭಾಗ್ಯವೇ ಸರಿ. 12 ಅಡಿ ವ್ಯಾಸದ ಪೈಪ್ ಅಳವಡಿಕೆ ನಮ್ಮ ಪಾಲಿನ ಎಲ್ಲಾ ನೀರು ಸೆಳೆಯಲಿದೆ. ಈ ಬಗ್ಗೆ ನೀರಾವರಿ ತಜ್ಞರು ಸಹ ವಿರೋಧಿಸಿದ್ದಾರೆ. ಏನಾಗಲಿ ನೀರು ಹರಿಸುವ ಹಠಕ್ಕೆ ಬಿದ್ದ ಡಿಸಿಎಂ ಅವರ ದರ್ಪ ಈಗ ಪೊಲೀಸರ ಮೂಲಕ ಕಾಣುತ್ತಿದೆ. ರೈತರು ಯಾವುದಕ್ಕೂ ಜಗ್ಗವುದಿಲ್ಲ. ಕಾಮಗಾರಿ ನಡೆಯದಂತೆ ತಡೆಯಲು ಸಿದ್ದರಿದ್ದು ಉಗ್ರ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುತ್ತವೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ಹೇಮಾವತಿ ನೀರು ನಮ್ಮ ಹಕ್ಕು. ನಮ್ಮ ಪಾಲಿನ 24 ಟಿಎಂಸಿ ನೀರು ಜಿಲ್ಲೆಗೆ ಹರಿಸಬೇಕು. ಇದರಲ್ಲೇ ಕದ್ದು ಕೊಂಡೊಯ್ಯುವ ಕೆಲಸ ಸರ್ಕಾರ ಮಾಡುತ್ತಿದೆ. ಜಿಲ್ಲೆಯ ರೈತರು ಸರ್ಕಾರಕ್ಕೆ ಬೇಕಲ್ಲವೇ ಎಂಬುದು ತಿಳಿಯುತ್ತಿಲ್ಲ. ಅಕ್ರಮವಾಗಿ ಪೈಪ್ ಲೈನ್ ಮಾಡಿ ನೀರು ಹರಿಸುವುದು ಸರಿಯಲ್ಲ. ಇದರ ಬಗ್ಗೆ ಸಾವಿರಾರು ರೈತರು ವಿರೋಧ ತೋರಿ ಹೋರಾಟ ನಡೆಸಿದ್ದಾರೆ. ಆದರೆ ಸರ್ಕಾರಿ ಜಾಗ, ದೇವಸ್ಥಾನದ ಜಾಗವನ್ನು ಕಬಳಿಸಿ ಕೆಲಸ ಆರಂಭಿಸಿದ್ದು ಕಾನೂನು ಬಾಹಿರ. ಅಧಿಕಾರಿಗಳೇ ಈ ಅಕ್ರಮಕ್ಕೆ ಸಾಥ್ ನೀಡಿರುವುದು ಜನ ವಿರೋಧಿಯಾಗಿದೆ. ರೈತರನ್ನು ಒಂದು ಮಾತು ಕೇಳದೆ ಕೆಲಸ ಮಾಡಿದ್ದರ ಫಲ ರೈತರೇ ಸರ್ಕಾರಕ್ಕೆ ತೋರುತ್ತಾರೆ. ಹೋರಾಟ ಮುಂದುವರೆಸಿ ಬೃಹತ್ ಮಟ್ಟದಲ್ಲಿ ವಿರೋಧ ಮಾಡಲಿದ್ದೇವೆ. ಸಾವಿರಾರು ರೈತರು ಒಗ್ಗೂಡಿ ಸರ್ಕಾರಕ್ಕೆ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ಸಿ.ಜಿ.ಲೋಕೇಶ್, ಸಿ.ಟಿ.ಕುಮಾರ್, ಗುರು ಚನ್ನಬಸವಯ್ಯ, ಯತೀಶ್, ಶಿವಕುಮಾರ್, ಸತ್ತಿಗಪ್ಪ, ಪ್ರಕಾಶ್ ಇತರರು ಇದ್ದರು.