ಅಧಿಕಾರಿಗಳಿಗೂ ಮಾಹಿತಿ ಕೊರತೆ, ಜನಪ್ರತಿನಿಧಿಗಳಿಗೂ ಮಾಹಿತಿ ಇಲ್ಲ
ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಹಲವೆಡೆ ನಕಲಿ ಹಕ್ಕುಪತ್ರಗಳಿಗೆ ಇ-ಖಾತೆ ಸೃಷ್ಟಿ ಮಾಡುತ್ತಿರುವ ಜಾಲಗಳು ಪತ್ತೆಯಾಗುತ್ತಿದ್ದು, ಅಧಿಕಾರಿಗಳು ಮತ್ತು ಸ್ಥಳೀಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕಿದೆ.
ಇದಕ್ಕೆ ನಿದರ್ಶನವೆಂಬಂತೆ ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ವೆಂಕಟೇನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ನಿವೇಶನ ಪಡೆಯಲು ನಕಲಿ ಹಕ್ಕುಪತ್ರಗಳನ್ನು ಸೃಷ್ಟಿ ಮಾಡಿರುವ ಆರೋಪ ಕೇಳಿಬಂದಿದ್ದು, ಗ್ರಾಪಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗಂಭೀರವಾಗಿ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗೊಡ್ಲುಮುದ್ದೇನಹಳ್ಳಿ ಗ್ರಾ.ಪಂಗೆ ಸೇರಿದ ವೆಂಕಟೇನಹಳ್ಳಿ ಗ್ರಾಮದಲ್ಲಿ ಖಾಲಿ ಜಮೀನುಗಳನ್ನು ಗುರಿಯಾಗಿಸಿಕೊಂಡ ಕೆಲವರು ನಕಲಿ ಹಕ್ಕುಪತ್ರಗಳ ತಯಾರಿಸಿ, ಅದಕ್ಕೆ ನಕಾಶೆಯನ್ನು ಸಿದ್ದಪಡಿಸಿ ಗ್ರಾಮ ಪಂಚಾಯಿತಿಯಲ್ಲಿ ಇ-ಖಾತೆ ಮಾಡಿಸಿಕೊಂಡು ಅಕ್ರಮವಾಗಿ ನಿವೇಶನಗಳನ್ನು ಪಡೆಯಲು ಮುಂದಾಗಿರುವುದು ಗ್ರಾಪಂ ಹಿಂಬರಹದಿಂದ ಬೆಳಕಿಗೆ ಬಂದಿದೆ.

ವೆಂಕಟೇನಹಳ್ಳಿ ಗ್ರಾಮದಲ್ಲಿ ಮುನೇಗೌಡ ಎಂಬ ವ್ಯಕ್ತಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಅವರು ಅವಿವಾಹಿತರಾಗಿದ್ದು, ಪಿತ್ರಾರ್ಜಿತವಾಗಿ ಅವರಿಗೆ ವೆಂಕಟೇನಹಳ್ಳಿ ಗ್ರಾಮದಲ್ಲಿ ಖಾತೆ ನಂ.57ರಲ್ಲಿ ವಿಸ್ತೀರ್ಣ 90*160 ಸ್ವತ್ತು ಇದೆ. ಈ ಸ್ವತ್ತಿನಲ್ಲಿ ಸುಮಾರು 60 ವರ್ಷಗಳಿಂದ ಅವರು ಸ್ವಾಧೀನದ ಮೂಲಕ ಹುಣಸೆ, ಜಾಲಿ ಇತರೆ ಮರಗಳನ್ನು ಪೋಷಣೆ ಮಾಡಿದ್ದರು. ಇದೀಗ ಮುನೇಗೌಡರಿಗೆ ಸೇರಿದ ಜಮೀನಿಗೆ ಕೆಲವರು ನಕಲಿ ಹಕ್ಕುಪತ್ರಗಳ ಸೃಷ್ಟಿಸಿ, ನಕಾಶೆ ಸಿದ್ದಪಡಿಸಿ, ಅದೇ ಸ್ವತ್ತಿಗೆ ಅಕ್ರಮವಾಗಿ ಖಾತೆಯನ್ನು ಮಾಡಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
ಅಧಿಕಾರಿಗಳತ್ತ ದುಂಬಾಲು: ನಕಲಿ ಹಕ್ಕುಪತ್ರಗಳನ್ನು ಸರ್ಕಾರ ನಮಗೆ ನೀಡಿರುವುದಾಗಿ ಗ್ರಾಪಂ ಅಧಿಕಾರಿಗಳನ್ನು ನಂಬಿಸಿ, ವೆಂಕಟೇನಹಳ್ಳಿ ಗ್ರಾಮದ ಮುನೇಗೌಡರ ಸ್ವತ್ತಿನಲ್ಲಿ ನಿವೇಶನಗಳಿಗೆ ಅಕ್ರಮವಾಗಿ ಖಾತೆ ಪಡೆದಿದ್ದಾರೆ. ಇದೇ ರೀತಿ ಮತ್ತಷ್ಟು ಮಂದಿ ಅಕ್ರಮವಾಗಿ ನಿವೇಶನ ಪಡೆಯಲು ಇ-ಖಾತಾ ಮಾಡಿಕೊಡುವಂತೆ ಅಧಿಕಾರಿಗಳ ಮುಂದೆ ದುಂಬಾಲು ಬೀಳುತ್ತಿರುವುದು ಕಂಡುಬಂದಿದೆ.
ಪಂಚಾಯಿತಿಗೆ ಪಂಗನಾಮ: ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಆರಂಭಗೊಂಡ ಅವಧಿಯಿಂದಲೂ ಈವರೆಗೆ ವೆಂಕಟೇನಹಳ್ಳಿ ಗ್ರಾಮದ ಜನರಿಗೆ ಯಾವುದೇ ಹಕ್ಕುಪತ್ರವನ್ನು ವಿತರಿಸಿಲ್ಲ. ಈ ಹಿಂದೆ ಕೋರಮಂಗಲ ಮಂಡಲ್ ನಿಂದಲೂ ಸಹ ವೆಂಕಟೇನಹಳ್ಳಿ ಗ್ರಾಮದ ಜನರಿಗೆ ಸರ್ಕಾರದಿಂದ ಫಲಾನುಭವಿಗಳನ್ನು ಗುರುತಿಸಿ ಯಾವುದೇ ಹಕ್ಕುಪತ್ರ, ನಕಾಶೆ ನೀಡಿರುವುದಿಲ್ಲ ಎಂದು ಈಗಿನ ಗ್ರಾಪಂ ಅಧಿಕಾರಿಗಳೇ ಹಿಂಬರಹ ನೀಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಹಲವು ಅನುಮಾನ: ಸರ್ಕಾರ ಹಕ್ಕುಪತ್ರವನ್ನು ನೀಡಿದ್ದರೆ ಇಷ್ಟೋತ್ತಿಗಾಗಲೇ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುತ್ತಿದ್ದರು. ಅಲ್ಲದೇ ಸರ್ಕಾರವೇ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸುತ್ತಿತ್ತು. ಆದರೆ, ಇದ್ಯಾವುದು ಆಗದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಅಲ್ಲದೇ ಈಗ ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳುವ ಜಾಲದಿಂದ ಸ್ವಂತ ಸ್ವತ್ತುಗಳನ್ನು ಹೊಂದಿರುವ ಮಾಲೀಕರಿಗೆ ಆತಂಕ ಶುರುವಾಗಿದೆ.
ಅರಣ್ಯ ಇಲಾಖೆಗೆ ಸುಳ್ಳು ಮಾಹಿತಿ: ಪಿತ್ರಾರ್ಜಿತವಾಗಿ ಮುನೇಗೌಡರಿಗೆ ಸೇರಿದ ಸ್ವತ್ತಿನಲ್ಲಿ ನಕಲಿ ಹಕ್ಕುಪತ್ರಗಳನ್ನು ಹೊಂದಿರುವವರು, ಮರಗಳನ್ನು ಕಡಿದು ನಂತರ ಅರಣ್ಯ ಇಲಾಖೆಗೆ ಸುಳ್ಳು ಮಾಹಿತಿ ನೀಡುವ ಮೂಲಕ ಆ ಸ್ವತ್ತಿನಲ್ಲಿ ಇರುವ ಮರಗಳನ್ನು ಕಡಿಯಲು ಅವಕಾಶ ನೀಡುವಂತೆ ಇಲಾಖೆಯ ಅಧಿಕಾರಿಗಳನ್ನು ವಂಚಿಸಲು ಮುಂದಾಗಿದ್ದಾರೆ. ಈ ಸ್ವತ್ತು ಸರ್ಕಾರಕ್ಕೆ ಸೇರಿದೆಯೇ ಎಂಬುದರ ಬಗ್ಗೆ ಅರಣ್ಯ ಇಲಾಖೆಗೂ ಖಾತ್ರಿ ಇಲ್ಲದ ಕಾರಣ ಇಲಾಖೆಯ ಅಧಿಕಾರಿಗಳಿಗೆ ಗೊಂದಲ ಉಂಟುಮಾಡಿದೆ.

ಪೊಲೀಸರಿಗೂ ಸುಳ್ಳು ಮಾಹಿತಿ: ನಕಲಿ ಹಕ್ಕುಪತ್ರಗಳನ್ನು ಹೊಂದಿರುವ ವೆಂಕಟೇನಹಳ್ಳಿ ಗ್ರಾಮದ ಕೆಲವರು, ಪೊಲೀಸ್ ಇಲಾಖೆಗೂ ಸುಳ್ಳು ಮಾಹಿತಿ ನೀಡಿ ವಂಚಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ರಜಾ ದಿನಗಳನ್ನು ಟಾರ್ಗೆಟ್ ಮಾಡಿ ಮುನೇಗೌಡರ ಸ್ವತ್ತಿನಲ್ಲಿ ಅಕ್ರಮವಾಗಿ ನಿವೇಶನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
ಬೆಸ್ಕಾಂಗೂ ಅರ್ಜಿ: ಅಕ್ರಮ ನಿವೇಶನ ಹೊಂದಿರುವವರು ತಮ್ಮ ನಿವೇಶನ ಉಳಿಸಿಕೊಳ್ಳಲು ಇನ್ನಿತರ ದಾಖಲೆಗಳನ್ನು ಸೃಷ್ಟಿಗೆ ಮುಂದಾಗಿದ್ದಾರೆ. ಬೆಸ್ಕಾಂಗೆ ಅರ್ಜಿ ಸಲ್ಲಿಸುವ ಮೂಲಕ ವಿದ್ಯುತ್ ಸಂಪರ್ಕ ನೀಡುವಂತೆ ಮೊರೆ ಹೋಗಿದ್ದಾರೆ.
ಸರ್ವೆ ನಂಬರ್‌ಗಳಲ್ಲಿ ಕಾಟ: ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಸರ್ವೆ ನಂಬರ್‌ಗಳಲ್ಲಿ ಖಾಲಿ ಇರುವ ಕೃಷಿ ಭೂಮಿಯ ಸ್ಥಳಗಳಲ್ಲಿಯೂ ಮಾಲೀಕರ ದಾರಿ ತಪ್ಪಿಸಿ, ಅಕ್ರಮವಾಗಿ ನಿವೇಶನ ಹೊಂದಲು ಮುಂದಾಗಿದ್ದಾರೆ. ಈ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ಗ್ರಾಮದ ಹಿರಿಯ ಮುಖಂಡರೊಬ್ಬರು ಒತ್ತಾಯಿಸಿದ್ದಾರೆ.

ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲ: ಮುನೇಗೌಡರಿಗೆ ಸೇರಿದ ಸ್ವತ್ತು ಈಗ ನ್ಯಾಯಾಲಯದಲ್ಲಿದೆ. ಆದಾಗ್ಯೂ ಇವರ ಸ್ವತ್ತಿನಲ್ಲಿ ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿಕೊಂಡಿರುವ ಕೆಲವರು, ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ನಿವೇಶನ ಪಡೆಯುತ್ತಿರುವ ಆರೋಪ ಕೇಳಿಬಂದಿದೆ.
“ನಕಲಿ ಹಕ್ಕುಪತ್ರದ ಕುರಿತು ಯಾವುದೇ ಮಾಹಿತಿಯಿಲ್ಲ. ಅದೇ ಗ್ರಾಮದ ಮುನೇಗೌಡ ಎಂಬುವರ ನಿವೇಶನದ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ, ಸ್ಥಳ ಪರಿಶೀಲನೆ ನಡೆಸಲಾಗುವುದು.”
- ಸೌಮ್ಯಾ, ಪಿಡಿಒ, ಗೊಡ್ಲುಮುದ್ದೇನಹಳ್ಳಿ ಗ್ರಾಪಂ.
“ಗೊಡ್ಲುಮುದ್ದೇನಹಳ್ಳಿ ಗ್ರಾಪಂನ ವೆಂಕಟೇನಹಳ್ಳಿ ಗ್ರಾಮಕ್ಕೆ ಹಕ್ಕುಪತ್ರ, ನಕಾಶೆ ನೀಡಿರುವ ಬಗ್ಗೆ ಪಂಚಾಯಿತಿಯಲ್ಲಿ ದಾಖಲೆಗಳಲ್ಲಿ ಮಾಹಿತಿ ಲಭ್ಯವಿರುವುದಿಲ್ಲ. ಹಕ್ಕುಪತ್ರಗಳು ಅಸಲಿಯೋ? ನಕಲಿಯೋ? ಎಂಬುದು ಗೊತ್ತಿಲ್ಲ.”
- ಶ್ರೀನಿವಾಸ್ ಕಾರ್ಯದರ್ಶಿ, ಗೊಡ್ಲುಮುದ್ದೇನಹಳ್ಳಿ ಗ್ರಾಪಂ.
ಒಟ್ಟಾರೆಯಾಗಿ ಸರ್ಕಾರ ನಿವೇಶನ ನೀಡಿರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ಬೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳು ಹಕ್ಕುಪತ್ರ ನಕಲಿಯೋ ಅಥವಾ ಅಸಲಿಯೋ ಎಂಬ ಕುರಿತು ಸೂಕ್ತ ಪರಿಶೀಲನೆ ನಡೆಸಿ, ನಕಲಿ ಜಾಲದ ಅಸಲಿಯತ್ತನ್ನು ಬಯಲಿಗೆಳೆಯಬೇಕಿದೆ.