ರಾಜ್ಯದಾದ್ಯಂತ ಪ್ರತೀ ವಾರ್ಡ್‌ನಲ್ಲೂ ರೈತ ಕಾರ್ಯಕರ್ತರನ್ನು ಹುಟ್ಟಿಹಾಕಲು ಸದಸ್ಯತ್ವ ನೋಂದಣಿ ಮಾಡಲಾಗುವುದು. ಮುಂದಿನ ರಾಜ್ಯ ರಾಜಕೀಯ ನಿರ್ಣಯಗಳಲ್ಲಿ ರೈತ ಸಂಘ ಸಕ್ರಿಯ ಪಾತ್ರವಹಿಸಲಿದೆ ಎಂದು ಕರ್ನಾಟಕದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ನೀರಾವರಿ ಕಚೇರಿ ಮುಂಭಾಗದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಗೆಜ್ಜಲಗೆರೆ ಗೋಲಿಬಾರ್‌ನಲ್ಲಿ ಮಡಿದ ರೈತರ ಸ್ಮರಣಾರ್ಥ ಆಯೋಜಿಸಿದ್ದ ಹುತಾತ್ಮ ದಿನಾಚರಣೆ ಮತ್ತು ತಾಲೂಕು ಮಟ್ಟದ ರೈತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ರೈತ ಹೋರಾಟದ ಇತಿಹಾಸದಲ್ಲಿ ನರಗುಂದ, ನವಲಗುಂದ, ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಸೇರಿದಂತೆ ವಿವಿಧೆಡೆ ನಡೆದ ಗೋಲಿಬಾರ್‌ನಿಂದ 159 ಮಂದಿ ರೈತರು ಪೋಲಿಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಇಂದು ಗೆಜ್ಜಲಗೆರೆ ಗೊಲಿಬಾರ್‌ನಲ್ಲಿ ಮಡಿದ ಸಿದ್ದಪ್ಪ, ನಾಥಪ್ಪ ಅವರ ಸ್ಮರಣಾರ್ಥ ರೈತ ಹುತಾತ್ಮ ದಿನಾಚರಣೆ ಆಚರಿಸುತಿದ್ದೇವೆ. ಹುತಾತ್ಮರಾದ ಎಲ್ಲಾ ರೈತ ನಾಯಕರ, ರೈತಪರ ಹೋರಾಟಗಾರರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಸಲುವಾಗಿ ಪುಸ್ತಕ ರೂಪದಲ್ಲಿ ಹೊರತರುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಂಡ್ಯ | ಎತ್ತಂಗಡಿ ಭೀತಿಯಲ್ಲಿ ತಮಿಳು ಕಾಲೋನಿ ನಿವಾಸಿಗಳು: ‘ಜಾಗ ಬಿಟ್ಟು ಕದಲಲ್ಲ’ ಎಂದ ಜನ

ರೈತ ಸಂಘದ ಖಜಾಂಚಿ ಲಿಂಗಾಪ್ಪಾಜಿ ಮಾತನಾಡಿ, ಇಲ್ಲಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ 1982ರಲ್ಲಿ ಒಪ್ಪಿಗೆ ನೀಡಿದ ರೈತರಿಗೆ ಒಂದು ರೀತಿ, ಒಪ್ಪಿಗೆ ನೀಡದ ರೈತರಿಗೆ ಒಂದು ರೀತಿಯ ಹಣ ನೀಡುತ್ತಿತ್ತು. ಇದರಿಂದ ಬೇಸತ್ತು ರೈತರು ಹೋರಾಟಕ್ಕಿಳಿದಿದ್ದರು. ಬಂಡವಾಳಶಾಹಿಗಳ ಪರವಾಗಿದ್ದ ಆಗಿನ ಸರಕಾರ ಚಳವಳಿಗಳನ್ನು ಹತ್ತಿಕ್ಕಲು ಗೋಲಿಬಾರ್ ಮಾಡಿಸಿತ್ತು. ಪ್ರಾರಂಭದಲ್ಲಿ ಕಬ್ಬು ಬೆಳೆಗಾರರಿಗಾಗಿ ಸ್ಥಾಪಿಸಿದ್ದ ಸಂಘವೇ ಮುಂದೆ ರೈತ ಸಂಘವಾಯಿತು ಎಂದು ಮಾಹಿತಿ ನೀಡಿದರು.
ರೈತ ಸಂಘ ವಿಭಾಗೀಯ ಘಟಕದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಸರ್ಕಾರ ವಳಗೆರೆಹಳ್ಳಿ ನಾಥೇಗೌಡ, ಗೆಜ್ಜಲಗೆರೆ ಸಿದ್ದಪ್ಪರನ್ನು ಗುಂಡಿಕ್ಕಿ ಕೊಂದಿತು. ಸಕ್ಕರೆ ಕಾರ್ಖಾನೆಗಳು ಇಂದಿಗೂ ಕೂಡ ಕಬ್ಬಿಗೆ ಸರಿಯಾದ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ರಾಜ್ಯ ಸರಕಾರ ನಿಗದಿಪಡಿಸಿದ್ದ 150 ರೂ. ಹೆಚ್ಚುವರಿ ಬೆಲೆ ಪಾವತಿಸಬೇಕು. ಎಫ್‌ಆರ್‌ಪಿ ನಿಗದಿಪಡಿಸುವಾಗ 8.5 ಇಳುವರಿ ಮಾನದಂಡ ಮಾಡಬೇಕು. ಡಾ.ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ರೈತರೇ ವೆಚ್ಚ ಭರಿಸುವ ತೀರ್ಮಾನ ಹಿಂಪಡೆಯಬೇಕು. ಮಂಡ್ಯ ಜಿಲ್ಲೆಯ ಬೇಸಿಗೆ ಬೆಳೆಗಳಿಗೆ ನೀರನ್ನು ಒದಗಿಸಬೇಕು ಎಂಬಿತ್ಯಾದಿ 12 ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಉಪಸಮರದ ಗೆಲುವು– ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಕಾಂಗ್ರೆಸ್ ಸರ್ಕಾರ?
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಯಧುಶೈಲಾ ಸಂಪತ್, ರಾಜ್ಯ ಉಪಾಧ್ಯಕ್ಷರಾದ ಎ.ಎಲ್.ಕೆಂಪೂಗೌಡ, ವಿಭಾಗೀಯಾ ಸಂಘಟನಾ ಕಾರ್ಯದರ್ಶಿ ಹೊಸಕೊಟೆ ಬಸವರಾಜು, ನೇತ್ರಾವತಿ, ಪ್ರಧಾನ ಕಾರ್ಯದರ್ಶಿ ರಮ್ಯ ರಾಮಣ್ಣ, ತಾಲೂಕು ಅಧ್ಯಕ್ಷ ವಳಗೆರೆಹಳ್ಳಿ ಉಮೇಶ್, ಕಾರ್ಯದರ್ಶಿ ವಿನೋದ್ ಬಾಬು, ಅಣ್ಣೂರು ಬೋರೇಗೌಡ, ಮಂಡ್ಯ ತಾಲೂಕು ಅಧ್ಯಕ್ಷ ಮರಿಚನ್ನೇಗೌಡ, ಕಾರ್ಯದರ್ಶಿ ಮಲ್ಲಿಗೆರೆ ಅಣ್ಣಯ್ಯ, ಚಾಮರಾಜನಗರ ಕಾರ್ಯದರ್ಶಿ ಬಾಸ್ಕರ್, ಮಾಗಡಿ ರೈತ ಸಂಘದ ಅರುಣ್ ರಾಮಯ್ಯ, ರಾಮನಗರ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ, ಮರುವನಹಳ್ಳಿ ಶಂಕರ್, ರವಿ, ಪಾಂಡವಪುರ ಮಂಜು, ರಘು, ಬೈರಪಟ್ಟಣ ಶೊಭಾ ಹಾಜರಿದ್ದರು.