ಬೇನಾಮಿ ಆಸ್ತಿ ಖರೀದಿದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೈಸೂರು ತಾಲುಕಿನ ಕೋಚನಹಳ್ಳಿ ಗ್ರಾಮದ ಭೂಮಿ ಕಳೆದುಕೊಂಡ ರೈತರು ಮೈಸೂರಿಗೆ ಕಾಲ್ನಡಿಗೆ ಜಾಥಾ ನಡೆಸಿದ್ದಾರೆ. ಸುಮಾರು 965 ದಿನಗಳಿಂದ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕೋಚನಹಳ್ಳಿಯಲ್ಲಿ ಕೆಲವರು ಬೇನಾಮಿ ಆಸ್ತಿ ಖರೀದಿಸಿದ್ದಾರೆ. ಇದರಿಂದಾಗಿ ನಾವು ಭುಮಿ ಕಳೆದುಕೊಂಡಿದ್ದೇವೆ. ನಮಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ರೈತರು ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಆದರೂ, ಸರ್ಕಾರವಾಗಲೀ, ಅಧಿಕಾರಿಗಳಾಗಲೀ ಸ್ಪಂದಿಸಿಲ್ಲವೆಂದು ರೈತ ಮುಖಂಡರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಶುಕ್ರವಾರ ಮೈಸೂರಿನ ಎಸ್‌ಪಿ ಕಚೇರಿಗೆ ಕಾಲ್ನಡಿಗೆ ಜಾಥಾ ಆರಂಭಿಸಿದ್ದರು. ಜಾಥಾ ಕಡಕೊಳ ತಲುಪುವಷ್ಟರಲ್ಲಿ ರೈತರನ್ನು ಭೇಟಿ ಮಾಡಿದ ಮೈಸೂರು ಗ್ರಾಮಾಂತರ ಡಿವೈಎಸ್‌ಪಿ ಕರೀಮ್ ರಾವತ್ ಮತ್ತು ಇನ್‌ಸ್ಪೆಕ್ಟರ್ ಶೇಖರ್ ಸಭೆ ನಡೆಸುವುದಾಗಿ ಮನವೊಲಿಸಿ ಕಡಕೊಳ ಉಪ ಪೊಲೀಸ್ ಠಾಣೆಗೆ ರೈತ ಮುಖಂಡರನ್ನು ಕರೆದೊಯ್ದರು.
ಠಾಣೆಯಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿದ ಪೊಲೀಸರು, “ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಬೇನಾಮಿ ಆಸ್ತಿ ಖರೀದಿದಾರರ ವಿರುದ್ಧ ಎಫ್‌ಐಅರ್ ದಾಖಲಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಪೊಲೀಸರ ಮನವೊಲಿಕೆಯಿಂದ ಕಾಲ್ನಡಿಗೆ ಜಾಥಾವನ್ನು ರೈತರು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಚಂದ್ರಶೇಖರ್ ಮೇಟಿ, ಉಗ್ರ ನರಸಿಂಹ ಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ, ಪಿ ಮರಂಕಯ್ಯ, ಮಂಡಕಳ್ಳಿ ಮಹೇಶ್, ಶ್ರೀಮತಿ ನೇತ್ರಾವತಿ, ರಾಘವೇಂದ್ರ, ಚಂದ್ರಶೇಖರ, ಮಹೇಶ್,ಮುದ್ದು ರಾಜು,ಜೆ, ಸ್ವಾಮಿ, ಚಲುವರಾಜು, ಇನ್ನು ಹಲವಾರು ಮುಖಂಡರು ಪಾಲ್ಗೊಂಡಿದ್ದರು,