ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಇಂದು (ಆಗಸ್ಟ್ 23) ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ಸಭೆ ನಡೆದ ನಂತರ ಶಕ್ತಿಸೌಧದ ಹೊರಗಡೆ ಜಮಾಯಿಸಿದ್ದ ರೈತ ಮುಖಂಡರು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ನಾಡಿನ ಜಲ ವಿವಾದಗಳಾದ ಕಾವೇರಿ, ಮೇಕೆದಾಟು ಹಾಗೂ ಮಹದಾಯಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿರ್ಲಕ್ಷ್ಯದ ವಿರುದ್ಧ ರೈತರು ಕಿಡಿ ಕಾರಿದರು.
ಮಹದಾಯಿ ಯೋಜನೆಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕೇಂದ್ರ ಸರ್ಕಾರ ಯೋಜನೆಯ ಬಗ್ಗೆ ತಾತ್ಸಾರ ತೋರಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ಪ್ರಾರಂಭಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ‘ಮಹದಾಯಿ ಯೋಜನೆಗೆ ಅನುಮೋದನೆ ದೊರಕಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ರಾಜ್ಯದಿಂದ ಮಧ್ಯಂತರ ಅರ್ಜಿ ಸಲ್ಲಿಸಿ ತಡೆಯಾಗಿರುವ ಅರ್ಜಿಯನ್ನು ತೆರವುಗೊಳಿಸಲು ನಾನು ನಿಮ್ಮ ಜೊತೆ ಕೈಜೋಡಿಸುತ್ತೇನೆ’ ಎಂದು ರೈತರನ್ನು ಸಮಾಧಾನಪಡಿಸಲು ಮುಂದಾದರು.
ಈ ಸುದ್ದಿ ಓದಿದ್ದೀರಾ? 6,366 ಕೋಟಿ ರೂ. ನರೇಗಾ ಬಾಕಿ ಉಳಿಸಿಕೊಂಡಿರುವ ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ
ಸಂಸದರ ಉತ್ತರಗಳಿಂದ ತೃಪ್ತರಾಗದ ರೈತರು ಪ್ರಶ್ನಿಸುತ್ತಲೇ ಇದ್ದರು. ನಂತರ ತೇಜಸ್ವಿ ಸೂರ್ಯ ಸ್ಥಳದಿಂದ ಕಾಲ್ಕಿತ್ತರು.
ಸಿಎಂ ಭರವಸೆ
ಸರ್ವಪಕ್ಷ ಸಭೆಯಲ್ಲಿ ಮೇಕೆದಾಟು, ಕಾವೇರಿ, ಮಹದಾಯಿ, ಕೃಷ್ಣಾ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿಗಳ ಬಳಿ ಸರ್ಕಾರಕ್ಕೆ ಸರ್ವಪಕ್ಷ ನಿಯೋಗ ತೆರಳೋಣ, ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು.
‘ರಾಜ್ಯದ ಹಿತ ಕಾಪಾಡಲು ನಾವು ಎಂದಿಗೂ ಬದ್ಧರಾಗಿರುತ್ತೇವೆ. 5-6 ವರ್ಷಗಳಿಗೊಮ್ಮೆ ಮಳೆಯ ಕೊರತೆಯಿಂದಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಂಕಷ್ಟ ಎದುರಾಗುತ್ತದೆ. ಈ ಕುರಿತು ಸಂಕಷ್ಟ ಹಂಚಿಕೆ ಸೂತ್ರ ನಿರ್ದಿಷ್ಟಪಡಿಸಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರು ಸಮರ್ಥವಾಗಿ ವಾದ ಮಂಡಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಅಗತ್ಯ ಬೆಂಬಲ ನೀಡಲಿದೆ’ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ ಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಡಿ ವಿ ಸದಾನಂದಗೌಡ, ವೀರಪ್ಪ ಮೊಯಿಲಿ, ಸಚಿವರಾದ ಎಚ್ ಕೆ ಪಾಟೀಲ, ಚಲುವರಾಯಸ್ವಾಮಿ, ಡಾ.ಜಿ ಪರಮೇಶ್ವರ್, ಕೆ ಜೆ ಜಾರ್ಜ್, ಕೃಷ್ಣಭೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.