ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೈತಾಭಿಪ್ರಾಯ ಸಂಗ್ರಹ ಸಭೆ ನಡೆಸುತ್ತಿರುವುದು ರಾಜ್ಯದಲ್ಲೇ ಮೊದಲ ಪ್ರಯತ್ನ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ಶುಕ್ರವಾರ ಸಚಿವ ಎಂ.ಸಿ.ಸುಧಾಕರ್ ಮತ್ತು ಶಾಸಕ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ರೈತಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಸುಮಾರು 500 ಎಕರೆಯಷ್ಟು ಸರಕಾರಿ ಭೂಮಿ ಇದೆ. ಜತೆಗೆ ಕೃಷಿಗೆ ಯೋಗ್ಯವಲ್ಲದ ಒಣ ಭೂಮಿಯೂ ಇದೆ. ಇಲ್ಲಿ ಕೆಲ ರೈತರು ಮಾತ್ರ ದಾಳಿಂಬೆ, ದ್ರಾಕ್ಷಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದಲ್ಲದೇ ಈ ಜಾಗ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ಇಲ್ಲಿ ಕೈಗಾರಿಕೆಗಳು ತಲೆ ಎತ್ತಿದರೆ ಸುತ್ತಮುತ್ತಲಿನ ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಆ ಹಿನ್ನೆಲೆಯಲ್ಲಿ ಸರಕಾರ ಸುಮಾರು 2863 ಭೂಮಿಯನ್ನು ಗುರುತಿಸಿದೆ. ಆದರೆ, ಕೆಲ ರೈತರು, ರೈತ ಸಂಘ ಮುಖಂಡರು ಭೂಮಿ ಕೊಡುವುದಿಲ್ಲ ಎಂಬ ಆಕ್ಷೇಪಗಳನ್ನು ಎತ್ತಿದ್ದಾರೆ. ಅದಕ್ಕಾಗಿ ಇಂದು ಸುತ್ತಮುತ್ತಲಿನ ಹಳ್ಳಿಗಳ ರೈತರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರೈತರಿಗೆ ಎರಡು ರೀತಿಯ ಅರ್ಜಿಗಳನ್ನು ನೀಡಲಾಗಿದ್ದು, ಭೂಮಿ ಕೊಡಲು ಸಿದ್ದರಿರುವ ರೈತರು ಬಿಳಿ ಬಣ್ಣದ ಅರ್ಜಿಯನ್ನು ಮತ್ತು ಭೂಮಿ ಕೊಡಲು ಒಪ್ಪಿಗೆಯಿಲ್ಲದ ರೈತರು ಗುಲಾಬಿ ಬಣ್ಣದ ಅರ್ಜಿಯನ್ನು ತುಂಬಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ. ಪ್ರತಿ ದಿನ ಒಂದೊಂದು ಹಳ್ಳಿಯ ರೈತರನ್ನು ಕರೆಸಲಾಗುತ್ತಿದ್ದು, ರೈತರು ಪಹಣ, ಆಧಾರ್ ಕಾರ್ಡ್‌ನೊಂದಿಗೆ ಬಂದು ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರೈತರ ಅಭಿಪ್ರಾಯದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಭೂ ಸ್ವಾಧೀನ | ವಚನ ಭ್ರಷ್ಟರಾದ ಸಿದ್ದರಾಮಯ್ಯ, ಮುನಿಯಪ್ಪ: ರೈತ ಸಂಘ ತೀವ್ರ ವಾಗ್ದಾಳಿ
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್, ತಹಶೀಲ್ದಾರ್ ಸ್ವಾಮಿ, ತಾಪಂ ಸಿಇಒ ಹೇಮಾವತಿ ಸೇರಿದಂತೆ ರೈತ ಮುಖಂಡರು ಹಾಗೂ ರೈತರು ಹಾಜರಿದ್ದರು.