ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 16 ರಂದು ಬೆಳಗಾವಿಯ ರೈತ ಸರ್ಕಲ್ ನಿಂದ ಸುವರ್ಣ ಸೌಧದವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ವೈ. ಬಸವರಾಜ ಹೇಳಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ಟನ್ ಕಬ್ಬಿಗೆ ಕನಿಷ್ಠ 5500 ರೂ ಬೆಲೆ ನಿಗದಿಪಡಿಸಬೇಕು. 2021 – 22 ಸಾಲಿನಲ್ಲಿ ಟನ್ ಗೆ 150 ರೂ ಹಳೇ ಬಾಕಿಯನ್ನು ಕೋರ್ಟ್ ಆದೇಶವಿದ್ದರೂ ರೈತರಿಗೆ ತಲುಪಿಲ್ಲ. ಕೂಡಲೇ ತಲುಪಿಸಬೇಕು ಎಂದು ಆಗ್ರಹಿಸಿದರು.
ಬಗರ್ ಹುಕುಂ ಸಾಗುವಳಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ನಿಲ್ಲಬೇಕು. ನೈಜವಾಗಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದರು.
ಸ್ವಾಮಿನಾಥನ್ ಆಯೋಗದ ವರದಿಯನ್ನು ಚಾರಿಗೊಳಿಸಬೇಕು. ಬ್ರಿಟಿಷರ ಕಾಲದ ಗ್ರಾಮ ಠಾಣಾ ವ್ಯಾಪ್ತಿ ವಿಸ್ತಾರವಾಗಬೇಕು. ಗ್ರಾಮಗಳ ವ್ಯಾಪ್ತಿ ವೈಜ್ಞಾನಿಕ ಸರ್ವೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ 5.8 ಕೋಟಿ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದನ್ನು ವಿರೋಧಿಸುತ್ತೇನೆ ಹಾಗೂ ರಾಜ್ಯ ಸರ್ಕಾರ 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಖಂಡನೀಯ. ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ನಮ್ಮ ಸಹಕಾರ ಸಂಘಗಳಿಗೆ ನೀಡುತ್ತಿದ್ದ ಸಾಲವನ್ನು ಕಡಿತ ಮಾಡಿರುವ ಕೇಂದ್ರದ ರೈತ ವಿರೋಧಿ ಧೋರಣೆಯನ್ನು ಖಂಡಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕ ಜಿಲ್ಲಾಧ್ಯಕ್ಷ ಅನಿತಾ ನವಲಕಲ್, ಹುಲಿಗೆಯ್ಯ ತಿಮ್ಮಾಪುರ, ಚನ್ನಪ್ಪ, ಒಡೆಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
