ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಡಿಸೆಂಬರ್ 7ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಬೇಡಿಕೆಗಳನ್ನು ಈಡೇರಿಸುವವರೆಗೂ ಸುವರ್ಣಸೌಧದ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ರಾಹುಲ ಕುಬಕಡ್ಡಿ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ರೈತರಿಗೆ ಬರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸಬೇಕು. ಅದಕ್ಕಾಗಿ, ಸರ್ಕಾರದ ಮೇಲೆ ಒತ್ತಡ ತರಲು ಬೆಳಗಾವಿ ಚಲೋಗೆ ಕರೆ ಕೊಡಲಾಗಿದೆ: ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, “ಬರಗಾಲದ ಕಾರಣದಿಂದಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಪ್ರತಿ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ರೈತರಿಗೆ ಕಂಟಕವಾಗಿರುವ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು. ಕೃಷಿಗೆ ಹಗಲು 12 ಘಂಟೆಗಳ ಕಾಲ 3 ಫೆಸ್ ಹಾಗೂ ರಾತ್ರಿ ಸಿಂಗಲ್ ಫೆಸ್ ಉಚಿತ ವಿದ್ಯುತ್ ನೀಡಬೇಕು. 3-4 ವರ್ಷಗಳಿಂದ ಬಾಕಿ ಉಳಿದ ಬೆಳೆ ವಿಮೆಯನ್ನು ಕೂಡಲೇ ಕೊಡಬೇಕು” ಎಂದು ಆಗ್ರಹಿಸಿದರು.
“ಕೃಷ್ಣಾ ನದಿಯ ಆಲಿಮಟ್ಟಿ ಆಣೆಕಟ್ಟನ್ನು ಎತ್ತರಿಸಿ ಆದಕ್ಕೆ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕು. ಕಬ್ಬಿಗೆ ಪ್ರತಿ ಟನ್‌ಗೆ 5,000 ರೂಪಾಯಿ ಘೋಷಣೆ ಮಾಡಬೇಕು. ಕಬ್ಬಿಗೂ ಬೆಳೆ ವಿಮೆ ವ್ಯವಸ್ಥೆ ಮಾಡಬೇಕು, ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯುತ್ತಿರುವ ದ್ರಾಕ್ಷಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಸಂಚಾಲಕ ಪ್ರತಾಪ ನಾಗರಗೋಜಿ, ಜಿಲ್ಲಾ ಸಂಚಾಲಕ ನಜೀರ ನಂದರಗಿ, ತಿಕೋಟಾ ಸಂಚಾಲಕರು ಶಾನುರ ನಂದರಗಿ, ಅಭಿಷೇಕ ಹೂಗಾರ, ಶಶಿಕಾಂತ ಬಿರಾದಾರ, ಖಾದರಸಾಬ ವಾಲಿಕಾರ, ಗುರುಲಿಂಗ ಕಾಳಿ, ಇಲಾಯೀ ವಾಲಿಕಾರ, ಆಕಾಶ ಜಾನವರ, ರಾಮು ಗೌರಗುಂಡ, ರಾಜಕುಮಾರ ಹಿರೇಕುರಬರ, ಸುಧಾಕರ ನಲವಡೆ, ರಿಯಾಜ್ ವಾಲಿಕಾರ, ಸೇರಿದಂತೆ ಅನೇಕರು ಇದ್ದರು.