ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸುರುಪುರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ , ಹಸಿರು ಸೇನೆ ಹಾಗೂ ಸಾಮೂಹಿಕ ನಾಯಕತ್ವ ತಾಲೂಕು ಸಮಿತಿಯಿಂದ ಪ್ರತಿಭಟಿಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಬರಗಾಲದ ಸಂಕಷ್ಟದ ಪರಿಸ್ಥಿತಿಯಲ್ಲಿ ಕೂಡ ಅಲ್ಪ-ಸ್ವಲ್ಪ ಮಳೆಗೆ ರೈತರು ಸಾಲ ಸೂಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ರೈತರು ಅತಂತ್ರಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ತಾಲೂಕಿನಾದ್ಯಂತ ರೈತರು ಹತ್ತಿ ಬೆಳೆ ನಿರೀಕ್ಷೆಯಂತೆ ಬೆಳೆದಿಲ್ಲ, ಮಳೆ ಅಭಾವದಲ್ಲಿಯೂ ಬಿತ್ತನೆ ಮಾಡಿದ ಬೆಳೆ ಇದೀಗ ಕಟಾವಿಗೆ ಬಂದಿದೆ. ಆದರೆ ಸೂಕ್ತ ಬೆಲೆಯಿಲ್ಲದ ಕಾರಣ ಫಸಲಿಗೆ ಖರ್ಚು ಮಾಡಿದ ವೆಚ್ಚವೂ ಬಾರದ ರೀತಿಯಲ್ಲಿ ಖರೀದಿಸುತ್ತಾರೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ವರ್ಷವೂ ಹತ್ತಿ ಬೇಕಾಬಿಟ್ಟಿಯಾಗಿ ಖರೀದಿಸಿದ ಪರಿಣಾಮ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದೊದಗಿದೆ. ಇದನ್ನು ಅರಿತುಕೊಂಡು ಸಂಬಂಧಪಟ್ಟ ಕೃಷಿ ಇಲಾಖೆ, ಕೃಷಿ ಮಾರುಕಟ್ಟೆ ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು. ನಿರ್ಲಕ್ಷವಹಿಸದಲ್ಲಿ ಸಂಬಂಧಪಟ್ಟ ಇಲಾಖೆಯ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಬೇಡಿಕೆಗಳು :
1. ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳು ಮರಳು ಸಾಗಾಣಿಕೆಯಿಂದ ಹದಗೆಟ್ಟಿದ್ದು, ಧೂಳನಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುವುದು ತಡೆಯಬೇಕು.
2. ಗ್ರಾಮೀಣ ಪ್ರದೇಶಗಳಲ್ಲಿ ಹಾಳಾದ ರಸ್ತೆಗಳು ದುರಸ್ತಿಗೊಳಿಸಬೇಕು, ರಸ್ತೆ ರಿಪೇರಿಗೆ ಟೆಂಡರ್ ಕರೆಯಬೇಕು.
3. ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಬರ ಪರಿಹಾರ ಹಣ ಜಿಲ್ಲಾಧಿಕಾರಿಗಳ ಖಾತೆಗೆ ಜಮೆಯಾಗಿದೆ ಎಂದು ಹೇಳುತ್ತಿದ್ದು, ಅದನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕು.
4. ತಿಪ್ಪನಟಗಿಯಲ್ಲಿ ಸ್ಮಶಾನ ಭೂಮಿ ಅವಶ್ಯಕತೆವಿದ್ದು ಈ ಹಿಂದೆ ತಹಶೀಲ್ದಾರರು ಸರ್ಕಾರಿ ಗಾಯರಾಣ ಜಮೀನು ನೀಡಿ ಆದೇಶಿಸಿದ್ದರು. ಆದರೆ ಅದೇ ಗ್ರಾಮದ ಕೆಲವರು ಇದು ಸರ್ವೇ ನಂ. ನಲ್ಲಿರುವ ನಮ್ಮ ಜಮೀನು ಎಂದು ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕೂಡಲೇ ಇದನ್ನು ಸರಿಪಡಿಸಬೇಕು.
ಈ ಸುದ್ದಿ ಓದಿದ್ದೀರಾ? ಕಲಬುರಗಿಯಲ್ಲಿ ವಕೀಲನ ಬರ್ಬರ ಕೊಲೆ: ಎಲ್ಲೆಡೆ ಭುಗಿಲೆದ್ದ ವಕೀಲರ ಆಕ್ರೋಶ
ಈ ಸಂದರ್ಭದಲ್ಲಿ ಹಣಮಂತ್ರಾಯ ಚಂದಲಾಪೂರ, ಸಾಹೇಬಗೌಡ ಮದಲಿಂಗನಾಳ,ಅಯ್ಯಣ್ಣ ಹಾಲಭಾವಿ, ಭೀಮಣ್ಣ ತಿಪ್ಪನಟಗಿ, ದೇವಿಂದ್ರಪ್ಪ ತಿಪ್ಪನಟಗಿ, ಭೀಮನಗೌಡ ಕರ್ನಾಳ, ಇಮಾಮಸಾಬ ತಿಪ್ಪನಟಗಿ, ಕಾಮರಾಯ, ರಾಮಕೃಷ್ಣ, ನಾಯ್ಕೋಡಿ, ಭೀಮಣ್ಣ ದೊಡ್ಡಮನಿ ಇನ್ನಿತರರು ಉಪಸ್ಥಿತರಿದ್ದರು.