ಶ್ರೀಗಂಧ ಬೆಳೆ ಪ್ರಸಿದ್ಧ ಮತ್ತು ಪವಿತ್ರ ಸಸ್ಯವಾಗಿದ್ದು, ಶ್ರೀ ಗಂಧದಿಂದ ಪರಿಮಳ, ಕಲಾತ್ಮಕತೆ, ವೈದ್ಯಕೀಯ ಮತ್ತು ಧಾರ್ಮಿಕ ಗುಣಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ, ಅನೇಕ ಬಾರಿ ಶ್ರೀಗಂಧ ಉಪಯುಕ್ತವಾಗಿದೆ. ಅದರಲ್ಲಂತೂ ಸುಮಾರು ವರ್ಷಗಳಿಂದ ಈ ಬೆಳೆಯನ್ನು ಬೆಳೆಯಲು ಕೃಷಿ ಇಲಾಖೆಯಿಂದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ ಇಲ್ಲಿ ಶ್ರೀಗಂಧ ಬೆಳೆದಿರುವ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಂಡು ಸುಮಾರು 9 ವರ್ಷ ಕಳೆದರು ಭೂಮಿ ಇಲ್ಲದೆ ಅಥವಾ ಇನ್ನೂ ಪರಿಹಾರ ಬಾರದೆ ಕಾದು ಕುಳಿತಿರುವ ಅದೆಷ್ಟೋ ರೈತರಿದ್ದಾರೆ. ಮಲೆನಾಡಿನ ಭಾಗದಲ್ಲಿರುವ ತರೀಕೆರೆ ತಾಲೂಕು ಹಳಿಯೂರು ಗ್ರಾಮದ ರೈತರು ಇನ್ನೂ ಕೂಡ ಪರಿಹಾರ ಸಿಗುವ ನಿರೀಕ್ಷೆಯಲ್ಲೇ ಇದ್ದಾರೆ.
ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರವು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡಿದೆ. 21 ರೈತರ 500ಕ್ಕೂ ಹೆಚ್ಚು ಶ್ರೀಗಂಧ ಮರಗಳಿಗೆ ₹62 ಕೋಟಿ ಪರಿಹಾರದ ಮೊತ್ತವನ್ನು ಅರಣ್ಯ ಇಲಾಖೆ ನಿಗದಿಪಡಿಸಿದೆ. ಪರಿಹಾರ ನೀಡುವಂತೆ ಅರಣ್ಯ ಇಲಾಖೆ ವರದಿ ಸಲ್ಲಿಸಿದ್ದರೂ ಇನ್ನೂ ಕೂಡ ಪರಿಹಾರ ನೀಡಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಹಳಿಯೂರು ಗ್ರಾಮದಲ್ಲಿ ಬೇರೆ ಬೇರೆ ಸಮುದಾಯದ ಜನರು ವಾಸ ಮಾಡುತ್ತಿದ್ದಾರೆ. ಇದರಲ್ಲಿ 21 ಕುಟುಂಬದವರು ಹಲವು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ, ಇಷ್ಟೂ ಜನರ ಭೂಮಿಗೆ ಪರಿಹಾರ ಅನ್ನೋದು ಇಲ್ಲಿಯವರೆಗೂ ಕಂಡಿಲ್ಲ ಎನ್ನುತ್ತಾರೆ ಪರಿಹಾರ ಸಿಗದ ರೈತರು.
“ಕಳೆದ ಸುಮಾರು ವರ್ಷಗಳ ಹಿಂದೆಯೇ 21 ರೈತ ಕುಟುಂಬದವರು 3 ಎಕರೆ 30 ಗುಂಟೆ ಜಾಗದಲ್ಲಿ ರೈತರು ಸೇರಿ ಶ್ರೀಗಂಧದ ಬೆಳೆಯನ್ನು ಬೆಳೆದು ನಾವು ಬದುಕನ್ನು ಕಟ್ಟಿಕೊಂಡಿದ್ದೇವೆ. ನಂತರ 9 ವರ್ಷಗಳ ಹಿಂದೇ ಅಷ್ಟೂ ಜಾಗ ರಾಷ್ಟ್ರೀಯ ಹೆದ್ದಾರಿಯವರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಹಾಗೆಯೇ, ಕಡಿಮೆ ಪರಿಹಾರ ನಿಗದಿ ಮಾಡಿದ್ದಾರೆ. ₹62 ಕೋಟಿ ಪರಿಹಾರ ನೀಡಬೇಕಾಗಿದೆ. ಆದರೆ, ನಮಗೆ ಅಷ್ಟು ರೈತ ಕುಟುಂಬದವರಿಗೆ ₹1.50 ಕೋಟಿ ಪರಿಹಾರ ನಿಗದಿ ಮಾಡಿದ್ದಾರೆ. ಇದು ಯಾವ ನ್ಯಾಯ. ಒಂದು ಕಡೆ ಭೂಮಿಯೂ ಇಲ್ಲ, ಇನ್ನೊಂದೆಡೆ ಸರಿಯಾದ ಪರಿಹಾರವೂ ಸಿಕ್ಕಿಲ್ಲ” ಎಂದು ಶ್ರೀಗಂಧ ಬೆಳೆಗಾರ ರೈತ ಟಿ ಎನ್ ವಿಶು ಕುಮಾರ್ ಈದಿನ ಕಾಮ್ ಜೊತೆ ತಮ್ಮ ನೋವು ಹಂಚಿಕೊಂಡಿದ್ದಾರೆ.

ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿರುವ ಶ್ರೀ ಗಂಧದ ಮರಗಳಿಗೆ ಸೂಕ್ತ ದರ ನಿಗದಿಪಡಿಸಿ, ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಕಳೆದ 9 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಜೂನ್ 9ರಂದು ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದಾಗ ಬ್ಯಾನರ್‌ಗಳನ್ನು ಪೊಲೀಸರು ಕಿತ್ತು ಹಾಕಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಜೂನ್ 10ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ವಿದ್ಯುತ್ ಸರಬರಾಜು ಮಾಡುವ 220 ಕೆ.ವಿ ಸಾಮರ್ಥ್ಯದ ಹೈಪವರ್ ವಿದ್ಯುತ್ ಕಂಬ ಏರಿ ರೈತರಾದ ಟಿ ಎನ್ ವಿಶು ಕುಮಾರ್ ಪೆಟ್ರೋಲ್ ಬಾಟಲಿಯನ್ನು ಕೊರಳಿಗೆ ಹಾಕಿಕೊಂಡು ಪ್ರತಿಭಟನೆಯನ್ನು ಕೂಡ ಮಾಡಿದ್ದರು.

ಕಂದಾಯ, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ, ರೈತನ ಮನವೊಲಿಸಲು ಪ್ರಯತ್ನಿಸಿದ್ದಾರೆ. ನಮ್ಮ ರೈತರ ಬೇಡಿಕೆ ಈಡೇರದಿದ್ದರೆ “ಯಾರೇ ಹತ್ತಿರ ಬಂದರೆ ಬೆಂಕಿ ಹಚ್ಚಿಕೊಳ್ಳುವುದಾಗಿ” ಟಿ ಎನ್ ವಿಶು ಕುಮಾರ್ ತಿಳಿಸಿದ್ದರು. ನಂತರ ಉಪವಿಭಾಗಾಧಿಕಾರಿ ಡಾ.ಕೆ ಜೆ ಕಾಂತರಾಜ್ ಮಾತನಾಡಿ, ಪರಿಹಾರದ ವಿಷಯ ಚರ್ಚಿಸಲು ಸದ್ಯದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಜತೆ ಸಭೆ ನಡೆಸಲು ಮುಂದಾಗುತ್ತೇವೆ. ಸಭೆಯಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಸಮಸ್ಯೆ ಪರಿಹರಿಸಲು ಮುಂದಾಗೋಣ ಎರಡ್ಮೂರು ದಿನಗಳಲ್ಲಿ ಸಭೆ ಸೇರಿಸಿ ಮಾತಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಹಾಗೆಯೇ, ರೈತ ಸಂಘದ ರಾಜ್ಯ ಮುಖಂಡರ ಮಾತಿಗೆ ಒಪ್ಪಿದ ಟಿ.ಎನ್. ವಿಶುಕುಮಾರ್ ವಿದ್ಯುತ್ ಟವರ್‌ನಿಂದ ಕೆಳಗಿಳಿದಿದ್ದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಹಾಲಮೂರ್ತಿ ರಾವ್, ಪೊಲೀಸ್ ಇನ್ಸ್‌ಪೆಕ್ಟರ್ ರಾಮ ಚಂದ್ರನಾಯಕ್, ಗ್ರೇಡ್2 ತಹಸೀಲ್ದಾರ್ ನೂರುಲ್ ಹುದಾ, ಮೆಸ್ಕಾಂ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷೆ ಗಿರಿಜಮ್ಮ ನಾಗರಾಜ್, ಸದಸ್ಯ ಕುಮಾರ್, ಉಪ ತಹಸೀಲ್ದಾರ್ ರೇವಣ್ಣ, ಗ್ರಾಮ ಆಡಳಿತ ಅಧಿಕಾರಿ ಧನಂಜಯ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು.

“ಶ್ರೀಗಂಧ ರೈತರು ಎಂದಿನಂತೆ ನಮ್ಮ ಜಮೀನಿಗೆ ಹೋಗಬೇಕಾದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದುರುದ್ದೇಶದಿಂದ ತಡೆ ಹಿಡಿದಿದ್ದಾರೆ. ಹೀಗಾಗಿ ಮೌನ ಪ್ರತಿಭಟನೆಯನ್ನು ಹಳಿಯೂರಿನಲ್ಲಿ ನಡೆಸುತ್ತಿದ್ದೇವೆ. ಶ್ರೀಗಂಧದ ಮರಗಳಿಗೆ ಕೆಎಸ್ ಡಿಎಲ್ ನಿಗದಿಪಡಿಸಿರುವ ದರವನ್ನು ಪರಿಹಾರವಾಗಿ ನೀಡುತ್ತಿಲ್ಲ. ನಮ್ಮ ಜಮೀನಿನಲ್ಲಿ ನಾವುಗಳೇ ಟೋಲ್ ಹಣ ಸಂಗ್ರಹ ಮಾಡಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಉತ್ತರ ನೀಡಬೇಕು. ನಮ್ಮ ಸಮಸ್ಯೆ ಬಗೆಹರಿಸಬೇಕು” ಎಂದು ಟಿ ಎನ್ ವಿಶು ಕುಮಾರ್ ಈದಿನ ಕಾಮ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಂಚಾರಿ ನಿಯಮ ಉಲ್ಲಂಘನೆ:14 ಸಾವಿರ ದಂಡ ವಿಧಿಸಿದ ನ್ಯಾಯಾಲಯ
ಏನೇ ಆಗಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಶ್ರೀಗಂಧ ಬೆಳೆಯನ್ನು ಬೆಳೆಯುತ್ತಿದ್ದ ರೈತರ ಸಮಸ್ಯೆಯನ್ನು ಬಗೆಹರಿಸಿ, ಸೂಕ್ತವಾದ ಪರಿಹಾರವನ್ನು ನೀಡುತ್ತಾರೆಯೇ ಎಂದು ಕಾದು ನೋಡಬೇಕಿದೆ.